ನವದೆಹಲಿ, ಸೆ. 08 (DaijiworldNews/PY): ಟೀಂ ಇಂಡಿಯಾದ ಕ್ರಿಕೆಟ್ ಆಟಗಾರ ಶಿಖರ್ ಧವನ್ ಅವರು ತಮ್ಮ ಪತ್ನಿ ಆಯಿಷಾ ಮುಖರ್ಜಿ ಅವರಿಂದ ವಿಚ್ಛೇದನ ಪಡೆದಿದ್ದಾರೆ.
ಶಿಖರ್ ಧವನ್ ಅವರು ಆಸ್ಟ್ರೇಲಿಯಾ ಮೂಲದ ಆಯಿಷಾ ಮುಖರ್ಜಿ ಅವರನ್ನು ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದರು.
ವಿಚ್ಛೇದನದ ಬಗ್ಗೆ ಆಯಿಷಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, "ವಿಚ್ಛೇದನ ಎನ್ನುವುದು ಕೆಟ್ಟ ಪದ ಎಂದು ನಾನು ಭಾವಿಸಿದ್ದೇನೆ. ನನ್ನ ಬದುಕಿನಲ್ಲಿ ಎರಡು ಬಾರಿ ವಿಚ್ಛೇದನ ಪಡೆಯುವಂತಾಗಿದೆ. ಮೊದಲ ಬಾರಿ ವಿಚ್ಛೇದನ ಪಡೆಯುವಾಗ ನನಗೆ ಭಯವಾಗಿತ್ತು. ಇದೀಗ ಮತ್ತಷ್ಟು ಭಯವಾಗುತ್ತಿದೆ" ಎಂದಿದ್ದಾರೆ.
"ಇತ್ತೀಚೆಗಿನ ಬೆಳವಣಿಗೆಗೆ ಮನನೊಂದು ಈ ತೀರ್ಮಾನ ಕೈಗೊಳ್ಳಲಾಗಿದೆ. ಕುಟುಂಬದಲ್ಲಿನ ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಆಘಾತವಾಗಿದೆ" ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಆಯಿಷಾ ಅವರು ಶಿಖರ್ ಧವನ್ ಅವರನ್ನು ಎರಡನೇ ವಿವಾಹವಾಗಿದ್ದರು. ಇವರಿಗೆ ಒಂದು ಗಂಡು ಮಗುವಿದೆ. ಶಿಖರ್ ಧವನ್ ಅವರಿಂದ ಮುನ್ನ ಆಯಿಷಾ ಅವರು ಆಸ್ಟ್ರೇಲಿಯಾ ಮೂಲದ ಉದ್ಯಮಿಯನ್ನು ವಿವಾಹವಾಗಿದ್ದರು.
ಆಯಿಷಾ ಅವರು ತಮ್ಮ ಪೋಸ್ಟ್ನಲ್ಲಿ ವಿಚ್ಛೇದನಕ್ಕೆ ನಿಖರವಾದ ಕಾರಣವನ್ನು ಉಲ್ಲೇಖ ಮಾಡಿಲ್ಲ. ಈ ವಿಚಾರವಾಗಿ ಶಿಖರ್ ಧವನ್ ಅವರು ಕೂಡಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.