ಟೋಕಿಯೊ, ಆ. 30 (DaijiworldNews/HR): ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋದಲ್ಲಿ ಎರಡು ಬಾರಿ ಚಿನ್ನ ಗೆದ್ದಿದ್ದ ದೇವೇಂದ್ರ ಝಝಾರಿಯಾ ಅವರು ಈ ಬಾರಿ ಬೆಳ್ಳಿ ಪದಕ ಗಳಿಸಿದ್ದು, ಪುರುಷರ 'ಎಫ್ 56' ವಿಭಾಗದ ಡಿಸ್ಕಸ್ ಥ್ರೋನಲ್ಲಿ ಯೋಗೇಶ್ ಕಥೂನಿಯಾಗೆ ಬೆಳ್ಳಿ ಪದಕ ದೊರೆತಿದ್ದು, ಪುರುಷರ ಜಾವೆಲಿನ್ ಥ್ರೋ 'ಎಫ್46'ರಲ್ಲಿ ಸುಂದರ್ ಸಿಂಗ್ ಗುರ್ಜರ್ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್1 ವಿಭಾಗದಲ್ಲಿ ಅವನಿ ಲೇಖರಾ ಚಿನ್ನದ ಪದಕ ಗೆದ್ದುಕೊಂಡಿದ್ದು, ಇಂದು ಭಾರತಕ್ಕೆ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ದೊರೆತಿದೆ.
ಇನ್ನು 40 ವರ್ಷ ವಯಸ್ಸಿನ ಝಝಾರಿಯಾ ಅವರು ತಮ್ಮ 8ನೇ ವಯಸ್ಸಿನಲ್ಲಿ ಮರ ಏರುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಎಡಗೈ ಕಳೆದುಕೊಂಡಿದ್ದು, ಈ ಬಾರಿಯ ಪ್ಯಾರಾಲಿಂಪಿಕ್ಸ್ನಲ್ಲಿ ತಮ್ಮದೇ ಹಳೆಯ ದಾಖಲೆಯನ್ನು (63.97 ಮೀ) ಮತ್ತಷ್ಟು ಉತ್ತಮಪಡಿಸಿಕೊಂಡಿದ್ದಾರೆ.
25 ವರ್ಷ ವಯಸ್ಸಿನ ಗುರ್ಜರ್ ಅವರು 2015ರಲ್ಲಿ ತಮ್ಮ ಸ್ನೇಹಿತನ ಮನೆಗೆ ತೆರಳಿದ್ದಾಗ ಲೋಹದ ಹಲಗೆ ಬಿದ್ದು ಎಡಗೈ ಕಳೆದುಕೊಂಡಿದ್ದು, 64.01 ಮೀ ದೂರ ಎಸೆಯುವ ಮೂಲಕ ಮೂರನೇ ಸ್ಥಾನ ಪಡೆದರು.
ಜೈಪುರ ಮೂಲದ ಸುಂದರ್ ಸಿಂಗ್ ಗುರ್ಜರ್ 2017ರಲ್ಲಿ ಮತ್ತು 2019ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದಿದ್ದು, 2018ರಲ್ಲಿ ನಡೆದ ಜಕಾರ್ತ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗಳಿಸಿದ್ದರು.
ಇನ್ನು ಡಿಸ್ಕಸ್ ಥ್ರೋದಲ್ಲಿ ಬೆಳ್ಳಿ ವಿಜೇತ ಯೋಗೇಶ್ ಕಥೂನಿಯಾ ತಮ್ಮ ಕೊನೆಯ ಮತ್ತು ಆರನೇ ಯತ್ನದಲ್ಲಿ 44.38 ಮೀ ದೂರ ಎಸೆದಿದ್ದಾರೆ.