ಟೋಕಿಯೊ, ಆ 07 (DaijiworldNews/PY): ಭಾರತದ ಯುವ ಗಾಲ್ಫರ್ ಅದಿತಿ ಅಶೋಕ್ ಅವರಿಗೆ ಒಲಿಂಪಿಕ್ಸ್ ಪದಕ ಕೊಂಚದರಲ್ಲೇ ಕೈತಪ್ಪಿ ಹೋಗಿದೆ.
ಬೆಂಗಳೂರು ಮೂಲದ 23 ವರ್ಷದ ಅದಿತಿ ಅಶೋಕ್ ಉತ್ತಮ ಸಾಧನೆ ಪ್ರದರ್ಶಿಸಿದ್ದು, ಕೊನೆಯ ಸುತ್ತಿನ ಅಂತ್ಯಕ್ಕೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಮೂರನೇ ಹಂತದವರೆಗೂ ನ್ಯೂಜಿಲ್ಯಾಂಡ್ನ ಕೊ ಲಿಡಿಯಾ ಹಾಗೂ ಜಪಾನ್ನ ಇನಾಮಿ ಮೊನಿಗೆ ಅದಿತಿ ಅವರು ಪೈಪೋಟಿ ನೀಡುತ್ತಲೇ ಬಂದಿದ್ದರು. ಆದರೆ, ಕೊನೆಯ ಎರಡು ಹೋಲ್ಗಳಲ್ಲಿ ನ್ಯೂಜಿಲ್ಯಾಂಡ್ನ ಕೊ ಲಿಡಿಯಾ, ಜಪಾನ್ನ ಇನಾಮಿ ಮೊನಿ ಮುನ್ನಡೆ ಸಾಧಿಸಿದ್ದಾರೆ. ಹಾಗಾಗಿ ಅದಿತಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
"ಭಾರತದ ಮತ್ತೋರ್ವ ಹೆಣ್ಣುಮಗಳು ಒಲಿಂಪಿಕ್ನಲ್ಲಿ ಉತ್ತಮ ಪ್ರದರ್ಶನ ಸಾಧಿಸಿದ್ದಾರೆ. ಭಾರತದ ಗಾಲ್ಫ್ ಆಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಅದಿತಿ, ಉತ್ತಮ ಪ್ರದರ್ಶನ ತೋರುತ್ತಲೇ ಇದ್ದರು. ಅಭಿನಂದನೆಗಳು" ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶ್ಲಾಘಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಅಭಿನಂದಿಸಿದ್ದು, "ಅದಿತಿಯವರೇ ನೀವು ಗಾಲ್ಫ್ ಆಟದಲ್ಲಿ ಉತ್ತಮವಾದ ಪ್ರದರ್ಶನ ನೀಡಿದ್ದೀರಿ. ಆಕಸ್ಮಿಕವಾಗಿ ಪ್ರಶಸ್ತಿ ಕೈತಪ್ಪಿ ಹೋಗಿದೆ. ಆದರೆ, ನೀವು ಈವರೆಗೆ ಯಾವ ಭಾರತೀಯರೂ ಮಾಡದ ಸಾಧನೆಗೈದದ್ದೀರಿ. ಭವಿಷ್ಯದ ನಿಮ್ಮ ಅಭಿಯಾನಕ್ಕೆ ಶುಭಾಶಯಗಳು" ಎಂದಿದ್ದಾರೆ.