ಮುಂಬೈ ನ.16 (DaijiworldNews/AK): ವಿಶ್ವ ಕ್ರಿಕೆಟ್ನ ಅತ್ಯಂತ ಜನಪ್ರಿಯ ಟಿ20 ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ತನ್ನ ಸಾಂಪ್ರದಾಯಿಕ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲೇ ಮುಂದುವರಿಯುವುದು ಖಚಿತವಾಗಿದೆ.

ಇತ್ತೀಚೆಗೆ ಬಾಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮಂಡಳಿಯ ಸಭೆಯಲ್ಲಿ 2028ರಿಂದ 2035ರವರೆಗಿನ ಪ್ರಮುಖ ಐಸಿಸಿ ಟೂರ್ನಿಗಳ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ಈ ಅವಧಿಯಲ್ಲಿ ಐಪಿಎಲ್ಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲಾಗಿದೆ.
ಐಸಿಸಿ ಬಿಡುಗಡೆ ಮಾಡಿರುವ ಹೊಸ ಕ್ಯಾಲೆಂಡರ್ನಲ್ಲಿ ಎಲ್ಲಾ ಪ್ರಮುಖ ಪುರುಷರ ಟೂರ್ನಿಗಳನ್ನು ಜೂನ್ನಿಂದ ನವೆಂಬರ್ ನಡುವೆ ಆಯೋಜಿಸಲಾಗಿದೆ. ಇದರಿಂದಾಗಿ ಪ್ರತಿ ವರ್ಷ ಮಾರ್ಚ್ನಿಂದ ಮೇ ತಿಂಗಳವರೆಗಿನ ಅವಧಿಯು ಸಂಪೂರ್ಣವಾಗಿ ಐಪಿಎಲ್ಗಾಗಿ ಮೀಸಲಾಗಿರಲಿದೆ.
ಇತ್ತೀಚೆಗಷ್ಟೇ ಐಪಿಎಲ್ ಸ್ಥಾಪಕ ಲಲಿತ್ ಮೋದಿ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹ-ಮಾಲೀಕಿ ಜೂಹಿ ಚಾವ್ಲಾ, ಬೇಸಿಗೆಯ ವಿಪರೀತ ಬಿಸಿಲಿನ ಕಾರಣ ನೀಡಿ ಐಪಿಎಲ್ ಪಂದ್ಯಾವಳಿಯನ್ನು ಮಾರ್ಚ್-ಮೇ ಬದಲಿಗೆ ಜನವರಿ ಅಥವಾ ಅಕ್ಟೋಬರ್ ತಿಂಗಳಿಗೆ ಸ್ಥಳಾಂತರಿಸಬೇಕು ಎಂದು ಪ್ರತಿಪಾದಿಸಿದ್ದರು.
ಐಪಿಎಲ್ಗೆ ಐಸಿಸಿಯ ಪ್ರತ್ಯೇಕ ವಿಂಡೋದ ಅಗತ್ಯವಿಲ್ಲ, ಅದು ತನ್ನದೇ ಆದ ಸಮಯವನ್ನು ಸೃಷ್ಟಿಸಿಕೊಳ್ಳುವಷ್ಟು ಬೆಳೆದಿದೆ ಎಂದು ಲಲಿತ್ ಮೋದಿ ವಾದಿಸಿದ್ದರೆ, ಜೂಹಿ ಚಾವ್ಲಾ ಕೂಡ ಇದಕ್ಕೆ ಧ್ವನಿಗೂಡಿಸಿ ಉತ್ತಮ ವಾತಾವರಣಕ್ಕಾಗಿ ವೇಳಾಪಟ್ಟಿ ಬದಲಾಗಲಿ ಎಂದಿದ್ದರು.
ಆದರೆ, ಈ ಎಲ್ಲಾ ಚರ್ಚೆಗಳ ನಡುವೆಯೇ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮಹತ್ವದ ನಿರ್ಧಾರ ಪ್ರಕಟಿಸಿದ್ದು, ಈ ಮೂಲಕ ಐಪಿಎಲ್ ವಿಂಡೋ ಬದಲಾಗುವ ಎಲ್ಲಾ ವದಂತಿಗಳಿಗೆ ಪೂರ್ಣವಿರಾಮ ಹಾಕಿದೆ.