ಮುಂಬೈ,ನ.12 (DaijiworldNews/AK): ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 333 ರನ್ಗಳ ಬೃಹತ್ ಮೊತ್ತ ಕಲೆಹಾಕಿತ್ತು.

ಆದರೆ ಇದೇ ಪಿಚ್ನಲ್ಲಿ ಗುರಿ ಬೆನ್ನಟ್ಟಿದ ಭಾರತ ಕೇವಲ 89 ರನ್ಗಳಿಗೆ ಆಲೌಟ್ ಆಯಿತು. ಅಂದರೆ, ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ಗೆ ಉತ್ತಮವಾಗಿ ಕಂಡಿದ್ದ ಪಿಚ್ನಲ್ಲಿ ಎರಡನೇ ಇನ್ನಿಂಗ್ಸ್ನಲ್ಲಿ ಭಾರತದ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು. ಭಾರತದ ಅನುಭವಿ ಬ್ಯಾಟರ್ಗಳು ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗದಿದ್ದಕ್ಕೆ ಕಾರಣವೇನು? ಟೀಂ ಇಂಡಿಯಾದ ಬ್ಯಾಟಿಂಗ್ ಪಡೆ ಇಷ್ಟು ಬೇಗ ಕುಸಿಯಲು ಏನಾಗಿತ್ತು? ಈ ಬಗ್ಗೆ ತಂಡದ ಬ್ಯಾಟರ್ ಶ್ರೇಯಸ್ ಅಯ್ಯರ್ ಪಂದ್ಯದ ಬಳಿಕ ಮಾತನಾಡಿ ವಿವರಿಸಿದ್ದಾರೆ.
ಮೊದಲ ಇನ್ನಿಂಗ್ಸ್ಗೆ ಹೋಲಿಸಿದರೆ ಎರಡನೇ ಇನ್ನಿಂಗ್ಸ್ನಲ್ಲಿ ಪಿಚ್ನ ಸ್ವಭಾವ ಬದಲಾಗಿತ್ತು ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ. ‘ಇಂತಹ ಸೋಲನ್ನು ಎದುರಿಸುವುದು ನಿಜಕ್ಕೂ ಕಷ್ಟ. ಮೊದಲ ಇನ್ನಿಂಗ್ಸ್ ಮತ್ತು ಎರಡನೇ ಇನ್ನಿಂಗ್ಸ್ನ ಪಿಚ್ನಲ್ಲಿ ಸಾಕಷ್ಟು ವ್ಯತ್ಯಾಸವಿತ್ತು. ಮ್ಯಾಟ್ ಹೆನ್ರಿ ಮಾತ್ರ ಸರಿಯಾದ ಜಾಗದಲ್ಲಿ ಚೆಂಡನ್ನು ಎಸೆದು ಅದ್ಭುತ ಬೌಲಿಂಗ್ ಮಾಡಿದರು. ಅವರ ಪ್ರದರ್ಶನಕ್ಕೆ ಸಂಪೂರ್ಣ ಕ್ರೆಡಿಟ್ ಸಲ್ಲಬೇಕು’ ಎಂದು ಅಯ್ಯರ್ ತಿಳಿಸಿದ್ದಾರೆ.
ಆರಂಭದಲ್ಲಿ ಪಿಚ್ ಬ್ಯಾಟಿಂಗ್ಗೆ ಉತ್ತಮವಾಗಿದೆ ಎಂದೇ ಭಾವಿಸಿದ್ದೆವು. ನ್ಯೂಜಿಲೆಂಡ್ ತಂಡ 330ಕ್ಕೂ ಹೆಚ್ಚು ರನ್ ಗಳಿಸಿದ್ದರಿಂದ ಭಾರತಕ್ಕೂ ಸುಲಭವಾಗಿ ಗುರಿ ತಲುಪಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಪಿಚ್ ಸಂಪೂರ್ಣ ವಿಭಿನ್ನವಾಗಿ ವರ್ತಿಸಿತು ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದನೇ ಹಾಗೂ ಕೊನೆಯ ಏಕದಿನ ಪಂದ್ಯ ಭಾನುವಾರ ನಡೆಯಲಿದೆ. ಸರಣಿಯಲ್ಲಿ ಗೆಲುವು ಸಾಧಿಸಬೇಕಾದರೆ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಕಡ್ಡಾಯವಾಗಿ ಗೆಲ್ಲಬೇಕಿದೆ.