ಮುಂಬೈ, ನ.11 (DaijiworldNews/AA): ಪಂದ್ಯದ ವೇಳೆ ಏಕಾಗ್ರತೆ ಕಾಯ್ದುಕೊಳ್ಳಲು ಮತ್ತು ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ನಾನು ಬ್ಯಾಟಿಂಗ್ ಮಾಡುವಾಗ ನಿರಂತರವಾಗಿ 'ಸೀತಾ-ರಾಮ್' ಎಂದು ಜಪಿಸುತ್ತೇನೆಂದು ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ತಿಳಿಸಿದ್ದಾರೆ.

ನವೆಂಬರ್ 10ರಂದು ನಡೆದ ಎಸಿಸಿ ಪುರುಷರ ಅಂಡರ್-19 ಏಷ್ಯಾಕಪ್ 2026 ಟೂರ್ನಿಯ 'ಎ' ಗುಂಪಿನ ನಿರ್ಣಾಯಕ ಪಂದ್ಯಕ್ಕೂ ಮುನ್ನ ಆರ್ಯವೀರ್ ತಮ್ಮ ತಂದೆಯೊಂದಿಗೆ ಮಾತನಾಡಿದ್ದರು. "ಈ ಪಂದ್ಯದಲ್ಲಿ ನಾನು ದೊಡ್ಡ ಶತಕ ಬಾರಿಸುತ್ತೇನೆ" ಎಂದು ವೀರೇಂದ್ರ ಸೆಹ್ವಾಗ್ ಅವರಿಗೆ ಮಾತು ಕೊಟ್ಟಿದ್ದರು. ಬಳಿಕ ಈ ಪಂದ್ಯದಲ್ಲಿ ಯುಎಇ ವಿರುದ್ಧ ಕೇವಲ 168 ಎಸೆತಗಳಲ್ಲಿ 160 ರನ್ ಬಾರಿಸುವ ಮೂಲಕ ಭಾರತ ತಂಡಕ್ಕೆ 70 ರನ್ಗಳ ಭರ್ಜರಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆರ್ಯವೀರ್, "ನನ್ನ ತಂದೆಗೆ ಕೇವಲ ಶತಕಗಳಿಗಿಂತ ದೊಡ್ಡ ಇನ್ನಿಂಗ್ಸ್ಗಳೇ ಹೆಚ್ಚು ಇಷ್ಟ. ಅವರ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿ ನನ್ನ ಮೇಲಿದೆ. ಅಪ್ಪನಿಗೆ ಕೊಟ್ಟ ಮಾತಿನಂತೆ ಆಡಲು ಸಾಧ್ಯವಾಗಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ" ಎಂದು ಹೇಳಿದ್ದಾರೆ.