ಮುಂಬೈ, ನ.10 (DaijiworldNews/AK): ಫಿಲಿಪೈನ್ಸ್ನಲ್ಲಿ ನಡೆದ 7ನೇ ಏಸಿಯಾನ್ ಪ್ಲಸ್ ಓಪನ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಮಧ್ಯಪ್ರದೇಶದ 22 ವರ್ಷದ ಯುವ ಆಟಗಾರ ಅನುಜ್ ಶ್ರೀವಾತ್ರಿ ಜಯಭೇರಿ ಬಾರಿಸಿದ್ದಾರೆ.

ಈ ಗೆಲುವಿನೊಂದಿಗೆ ಅನುಜ್ ಭಾರತದ 100ನೇ ಗ್ರ್ಯಾಂಡ್ಮಾಸ್ಟರ್ ಆಗಿ ಹೊರಹೊಮ್ಮಿದರು. ಇದರೊಂದಿಗೆ ರಷ್ಯಾ, ಅಮೆರಿಕ ಮತ್ತು ಜರ್ಮನಿಯ ನಂತರ ವಿಶ್ವದಲ್ಲೇ 100 ಗ್ರ್ಯಾಂಡ್ಮಾಸ್ಟರ್ಗಳನ್ನು ಹೊಂದಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಗ್ರ್ಯಾಂಡ್ಮಾಸ್ಟರ್ ಎಂಬುದು ಒಬ್ಬ ಚೆಸ್ ಆಟಗಾರ ಜಾಗತಿಕ ಮಟ್ಟದಲ್ಲಿ ಪಡೆಯಬಹುದಾದ ಅತ್ಯುನ್ನತ ಮತ್ತು ಜೀವಮಾನದ ಗೌರವಾನ್ವಿತ ಪ್ರಶಸ್ತಿಯಾಗಿದೆ. ವಿಶ್ವ ಚೆಸ್ ಸಂಸ್ಥೆಯಾದ ‘ಫಿಡೆ’ ಈ ಬಿರುದನ್ನು ನೀಡುತ್ತದೆ. ಕ್ರಿಕೆಟ್ನಲ್ಲಿ ಹೇಗೆ ಅತ್ಯುತ್ತಮ ಸಾಧನೆ ಮಾಡಿದವರನ್ನು ಶ್ರೇಷ್ಠ ಆಟಗಾರರೆಂದು ಪರಿಗಣಿಸುತ್ತಾರೋ, ಹಾಗೆಯೇ ಚೆಸ್ ಲೋಕದ ಅತ್ಯುನ್ನತ ಪದವಿ ಅಥವಾ ಹೆಮ್ಮೆಯ ಶಿಖರವೇ ಈ ಗ್ರ್ಯಾಂಡ್ಮಾಸ್ಟರ್ ಪಟ್ಟ. ಒಮ್ಮೆ ಈ ಪ್ರಶಸ್ತಿ ಒಲಿದರೆ, ಅದು ಆಟಗಾರನ ಹೆಸರಿನೊಂದಿಗೆ ಜೀವಿತಾವಧಿಯ ಕೊನೆಯವರೆಗೂ ಉಳಿಯುತ್ತದೆ.
ಈ ಅತ್ಯುನ್ನತ ಸ್ಥಾನವನ್ನು ತಲುಪಲು ಆಟಗಾರರು ಕಠಿಣವಾದ ಎರಡು ನಿಯಮಗಳನ್ನು ಪೂರೈಸಬೇಕು. ಮೊದಲನೆಯದಾಗಿ, ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಜಯಗಳಿಸುವ ಮೂಲಕ ತಮ್ಮ ಜಾಗತಿಕ ರೇಟಿಂಗ್ ಅಂಕಗಳನ್ನು ಕನಿಷ್ಠ 2500ಕ್ಕೆ ಹೆಚ್ಚಿಸಿಕೊಳ್ಳಬೇಕು.
ಎರಡನೆಯದಾಗಿ, ಪ್ರಮುಖ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ವಿದೇಶಿ ಗ್ರ್ಯಾಂಡ್ಮಾಸ್ಟರ್ಗಳ ವಿರುದ್ಧವೇ ಅದ್ಭುತವಾಗಿ ಆಡಿ, ಮೂರು ಬಾರಿ ‘ಜಿಎಂ ನಾರ್ಮ್ಸ್’ (ಸಾಧನೆಯ ಪ್ರಮಾಣಪತ್ರ) ಗಳಿಸಬೇಕು. ಈ ಕಠಿಣ ಹಂತಗಳನ್ನು ದಾಟಿದಾಗ ಮಾತ್ರ ಒಬ್ಬ ಆಟಗಾರ ಅಧಿಕೃತವಾಗಿ ಜಗತ್ತಿನ ಶ್ರೇಷ್ಠ ಗ್ರ್ಯಾಂಡ್ಮಾಸ್ಟರ್ ಎನಿಸಿಕೊಳ್ಳುತ್ತಾನೆ.
ಇದೀಗ ಭಾರತವು ಚೆಸ್ ಲೋಕದಲ್ಲಿ 100 ಗ್ರ್ಯಾಂಡ್ಮಾಸ್ಟರ್ಗಳ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆ. ಈ ಮೂಲಕ ಈ ಅಪೂರ್ವ ಮೈಲಿಗಲ್ಲು ತಲುಪಿದ ವಿಶ್ವದ 4ನೇ ದೇಶ ಎಂಬ ಹೆಗ್ಗಳಿಕೆಯನ್ನು ನಮ್ಮ ಚೆಸ್ ಚತುರರು ಭಾರತಕ್ಕೆ ತಂದುಕೊಟ್ಟಿದ್ದಾರೆ.