ಮೆಲ್ಬೋರ್ನ್, ನ.09 (DaijiworldNews/TA): ಮೈದಾನದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಬೌಲರ್ಗಳ ಬೆವರಿಳಿಸುತ್ತಿದ್ದ ಆಸ್ಟ್ರೇಲಿಯಾದ ಖ್ಯಾತ ಟಿ20 ಆಟಗಾರ ಕ್ರಿಸ್ ಲಿನ್ ಇದೀಗ ಡೋಪಿಂಗ್ ವಿವಾದಕ್ಕೆ ಸಿಲುಕಿದ್ದಾರೆ. ಇಂಗ್ಲೆಂಡ್ನ ಟಿ20 ಬ್ಲಾಸ್ಟ್ ಟೂರ್ನಿಯ ವೇಳೆ ನಡೆಸಿದ ಡೋಪಿಂಗ್ ಪರೀಕ್ಷೆಯಲ್ಲಿ ಕೊಕೇನ್ನ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಅವರಿಗೆ ಒಂದು ತಿಂಗಳ ನಿಷೇಧ ವಿಧಿಸಲಾಗಿದೆ. ವಿಶೇಷವೆಂದರೆ, ಈ ಶಿಕ್ಷೆಯನ್ನು ಈಗಾಗಲೇ ಪೂರ್ಣಗೊಳಿಸಿರುವುದಾಗಿ ಇಂಗ್ಲೆಂಡ್ನ ಕ್ರಿಕೆಟ್ ನಿಯಂತ್ರಕ ಸಂಸ್ಥೆ ಬಹಿರಂಗಪಡಿಸಿದೆ.

36 ವರ್ಷದ ಕ್ರಿಸ್ ಲಿನ್ ಈ ಬಾರಿ ನಾರ್ಥಾಂಪ್ಟನ್ಶೈರ್ ತಂಡದ ಪರ ಆಡಿದ್ದರು. ಜುಲೈ 18ರಂದು ನಡೆದ ಟಿ20 ಬ್ಲಾಸ್ಟ್ ಫೈನಲ್ಸ್ ಡೇ ಸಂದರ್ಭದಲ್ಲಿ ಅವರ ಮೂತ್ರದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಕೊಕೇನ್ನ ಮೆಟಾಬೊಲೈಟ್ ಬೆಂಜಾಯ್ಲೆಕ್ಗೊನಿನ್ ಪತ್ತೆಯಾಗಿತ್ತು.
ಜುಲೈ 31ರಂದು ಕ್ರಿಕೆಟ್ ನಿಯಂತ್ರಕ ಸಂಸ್ಥೆ ಲಿನ್ ಅವರಿಗೆ ಪರೀಕ್ಷೆಯ ಫಲಿತಾಂಶ ತಿಳಿಸಿ ತಾತ್ಕಾಲಿಕ ನಿಷೇಧ ವಿಧಿಸಿತ್ತು. ಆಗಸ್ಟ್ 20ರಂದು ವಿಚಾರಣೆಗೆ ಪ್ರತಿಕ್ರಿಯಿಸಿದ ಲಿನ್, ಜುಲೈ 15ರ ಸಂಜೆ ಮತ್ತು ಜುಲೈ 16ರ ಮುಂಜಾನೆ ಕೊಕೇನ್ ಸೇವಿಸಿರುವುದಾಗಿ ಒಪ್ಪಿಕೊಂಡಿದ್ದರು. ಆದರೆ, ಈ ಸೇವನೆ ಸ್ಪರ್ಧೆಯ ಸಮಯದಲ್ಲಿ ನಡೆದದ್ದಲ್ಲ ಮತ್ತು ಕ್ರಿಕೆಟ್ನಲ್ಲಿ ತಮ್ಮ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳುವ ಉದ್ದೇಶ ಹೊಂದಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ಇದಕ್ಕೆ ಸಂಬಂಧಿಸಿದ ಪುರಾವೆಗಳನ್ನೂ ಸಲ್ಲಿಸಿದ್ದರು. ನಿಯಂತ್ರಕ ಸಂಸ್ಥೆಯೂ ಈ ವಿವರಣೆಯನ್ನು ಪರಿಗಣಿಸಿತ್ತು.
ಆರಂಭದಲ್ಲಿ ಕ್ರಿಕೆಟ್ ನಿಯಂತ್ರಕ ಸಂಸ್ಥೆ ಲಿನ್ಗೆ ಮೂರು ತಿಂಗಳ ನಿಷೇಧ ವಿಧಿಸಲು ಉದ್ದೇಶಿಸಿತ್ತು. ಆದರೆ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ಮಾದಕ ವಸ್ತು ಬಳಕೆಯಿಂದ ಹೊರಬರಲು ರೂಪಿಸಲಾದ ಚಿಕಿತ್ಸಾ ಮತ್ತು ಪುನರ್ವಸತಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿದರು. ಈ ಹಿನ್ನೆಲೆಯಲ್ಲಿ ಶಿಕ್ಷೆಯ ಅವಧಿಯನ್ನು ಒಂದು ತಿಂಗಳಿಗೆ ಇಳಿಸಲಾಯಿತು. ಅವರ ನಿಷೇಧದ ಅವಧಿಯನ್ನು 2026ರ ಜುಲೈ 31ರಿಂದ ಆಗಸ್ಟ್ 30ರವರೆಗೆ ಲೆಕ್ಕಹಾಕಲಾಗಿದೆ. ಹೀಗಾಗಿ ಸದ್ಯಕ್ಕೆ ನಿಷೇಧದ ಅವಧಿ ಪೂರ್ಣಗೊಂಡಿದೆ.
ಜುಲೈನಲ್ಲಿ ನಡೆದ ಡೋಪಿಂಗ್ ಪರೀಕ್ಷೆಯ ಪ್ರಕರಣ ನವೆಂಬರ್ನಲ್ಲಿ ಬಹಿರಂಗವಾಗಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಆಗಸ್ಟ್ನಲ್ಲಿ ತಾತ್ಕಾಲಿಕ ನಿಷೇಧ ವಿಧಿಸಲಾಗಿದ್ದರೂ, ಸೆಪ್ಟೆಂಬರ್ನಲ್ಲಿ ಅಧಿಕೃತ ಆರೋಪ ದಾಖಲಿಸಲಾಗಿತ್ತು. ಬಳಿಕ ಅಕ್ಟೋಬರ್ನಲ್ಲಿ ಲಿನ್ ಪುನರ್ವಸತಿ ಕಾರ್ಯಕ್ರಮ ಪೂರ್ಣಗೊಳಿಸಿರುವುದಕ್ಕೆ ಪುರಾವೆ ಸಲ್ಲಿಸಿದ್ದರು.
ಈ ನಡುವೆ, ಅವರ ವಿರುದ್ಧ ದಾಖಲಿಸಲಾಗಿದ್ದ ಎರಡು ಡೋಪಿಂಗ್ ಆರೋಪಗಳಲ್ಲಿ ಒಂದನ್ನು ಹಿಂಪಡೆಯಲಾಯಿತು. ಮಾದರಿಯಲ್ಲಿ ಪತ್ತೆಯಾದ ಕೊಕೇನ್ ಮೆಟಾಬೊಲೈಟ್ ಪ್ರಮಾಣವು ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆ (WADA) ನಿಗದಿಪಡಿಸಿರುವ ಕನಿಷ್ಠ ವರದಿ ಮಿತಿಗಿಂತ ಕಡಿಮೆಯಿದ್ದುದೇ ಇದಕ್ಕೆ ಕಾರಣ. ಅಂತಿಮವಾಗಿ ಒಂದು ತಿಂಗಳ ನಿಷೇಧ ವಿಧಿಸಲಾಗಿದ್ದು, ನವೆಂಬರ್ 6ರಂದು ಪ್ರಕರಣದ ವಿವರಗಳು ಸಾರ್ವಜನಿಕವಾಗಿ ಪ್ರಕಟಗೊಂಡಿವೆ.
ಬಿಗ್ ಬ್ಯಾಷ್ ಲೀಗ್ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರರಲ್ಲಿ ಒಬ್ಬರಾಗಿರುವ ಕ್ರಿಸ್ ಲಿನ್, ಮುಂಬರುವ ಟೂರ್ನಿಯಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯ ಬಗ್ಗೆ ವರದಿಗಳು ಪ್ರಕಟವಾಗಿವೆ. ಆದರೆ ಅವರ ಮುಂದಿನ ತಂಡದ ಒಪ್ಪಂದದ ಕುರಿತು ಅಧಿಕೃತ ದೃಢೀಕರಣ ಇನ್ನೂ ಲಭ್ಯವಿಲ್ಲ. ಈಗಾಗಲೇ ನಿಷೇಧದ ಶಿಕ್ಷೆ ಪೂರ್ಣಗೊಳಿಸಿರುವ ಲಿನ್ ಮತ್ತೆ ವೃತ್ತಿಪರ ಕ್ರಿಕೆಟ್ಗೆ ಮರಳುವ ನಿರೀಕ್ಷೆಯಿದೆ. ಈ ವಿವಾದದ ಬಳಿಕ ಅವರ ವೃತ್ತಿಜೀವನ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.