ನವದೆಹಲಿ, ನ.05 (DaijiworldNews/AK): ಟೀಮ್ ಇಂಡಿಯಾದ ಟಿ20 ತಂಡದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಕುಟುಂಬದೊಂದಿಗೆ ಪ್ರಧಾನಿಯವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಸೂರ್ಯಕುಮಾರ್ ಯಾದವ್ ಮಗಳು ರಿದ್ದಿಮಾ ಹಾಡಿದ ಭಜನೆಯನ್ನೂ ಮೋದಿ ಆಸಕ್ತಿಯಿಂದ ಆಲಿಸಿದ್ದಾರೆ. ಈ ಭೇಟಿಯ ವಿಡಿಯೋವನ್ನು ಹಂಚಿಕೊಂಡಿರುವ ಮೋದಿ, ದೀಪಾವಳಿಯ ಸಂಭ್ರಮಕ್ಕೆ ಮತ್ತಷ್ಟು ಭಕ್ತಿ ಮತ್ತು ಸಂತಸ ತುಂಬಿದ ಆ ಕ್ಷಣಗಳನ್ನು ಮೆಚ್ಚಿಕೊಂಡಿದ್ದಾರೆ.

ದೀಪಾವಳಿಯ ಬೆಳಕಿನ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಬಾರಿ ಕ್ರಿಕೆಟ್ ಲೋಕದ ವಿಶೇಷ ಅತಿಥಿಗಳ ಭೇಟಿ ಸಂತಸ ತಂದಿದೆ. ಭಾರತದ ಟಿ20 ತಂಡದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿ ದೇವಿಶಾ ಮತ್ತು ಮಗಳು ರಿದ್ಧಿಮಾ ಸೇರಿದಂತೆ ಕುಟುಂಬದವರೊಂದಿಗೆ ಪ್ರಧಾನಿಯವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯಲ್ಲಿನ ಪುಟ್ಟ ಕ್ಷಣವೊಂದು ಈಗ ಗಮನ ಸೆಳೆಯುತ್ತಿದೆ. ಬಾಲಕಿ ಹಾಡಿದ ಭಜನೆಯನ್ನು ಮೋದಿ ಅವರು ಮನಸಾರೆ ಆಲಿಸಿದ್ದು, ಆಕೆಯ ಗಾಯನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಪ್ರಧಾನಿಯವರ ನಿವಾಸದಲ್ಲಿ ನಡೆದ ಈ ಭೇಟಿಯ ವಿಡಿಯೋವನ್ನು ಮೋದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ “ರಾಮ್ ಮತ್ತು ಸರಯು ದೀಪಾವಳಿಯ ವಾತಾವರಣಕ್ಕೆ ಆಗಮಿಸಿದ್ದಾರೆ. ಇದರಿಂದ ಹಬ್ಬದ ಸಂಭ್ರಮ ಮತ್ತಷ್ಟು ಪವಿತ್ರ ಮತ್ತು ದೈವಿಕವಾಗಿದೆ” ಎಂಬ ಅರ್ಥದ ಶೀರ್ಷಿಕೆಯನ್ನು ನೀಡಿದ್ದಾರೆ. ಕುಟುಂಬದವರೊಂದಿಗೆ ಆತ್ಮೀಯವಾಗಿ ಸಮಯ ಕಳೆದ ಮೋದಿ, ಬಾಲಕಿಯ ಭಜನೆಯನ್ನೂ ಆಲಿಸಿ ಸಂತಸಪಟ್ಟಿದ್ದಾರೆ.