ಮುಂಬೈ, ನ.05 (DaijiworldNews/AK): WPL 2027: ವುಮೆನ್ಸ್ ಪ್ರೀಮಿಯರ್ ಲೀಗ್ನ 5ನೇ ಆವೃತ್ತಿಯ ಅಧಿಕೃತ ವೇಳಾಪಟ್ಟಿ ಪ್ರಕಟವಾಗಿದೆ.

ನೂತನ ವೇಳಾಪಟ್ಟಿಯ ಪ್ರಕಾರ, ಈ ಬಾರಿಯ ಟೂರ್ನಿಯು ಜನವರಿ 14 ರಿಂದ ಆರಂಭವಾಗಲಿದೆ. ಬಿಸಿಸಿಐ ಈ ಬಾರಿ ಟೂರ್ನಿಯನ್ನು ಎರಡು ಪ್ರತ್ಯೇಕ ಹಂತಗಳಲ್ಲಿ ಆಯೋಜಿಸಲು ಯೋಜನೆ ರೂಪಿಸಿದ್ದು, ಇದಕ್ಕಾಗಿ ಎರಡು ಪ್ರಮುಖ ಕ್ರೀಡಾಂಗಣಗಳನ್ನು ಆಯ್ಕೆ ಮಾಡಿದೆ. ಇದರೊಂದಿಗೆ ಈ ಸೀಸನ್ನಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ತರಲಾಗಿದೆ.
ಸಾಮಾನ್ಯವಾಗಿ ಫೆಬ್ರವರಿ ಕೊನೆ ಅಥವಾ ಮಾರ್ಚ್ ತಿಂಗಳಿನಲ್ಲಿ ನಡೆಯುತ್ತಿದ್ದ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿ, ಈ ಬಾರಿ ಮೊದಲ ಬಾರಿಗೆ 2027ರ ಜನವರಿ 14 ರಿಂದ ಫೆಬ್ರವರಿ 7 ರವರೆಗೆ ಜರುಗಲಿದೆ. ಮಾರ್ಚ್ ತಿಂಗಳಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಟೂರ್ನಿ ಇರುವುದರಿಂದ ಈ ಬದಲಾವಣೆ ಮಾಡಲಾಗಿದೆ. ಅಲ್ಲದೆ, ಮಹಿಳಾ ಟೂರ್ನಿಗೆ ಹೆಚ್ಚಿನ ಪ್ರಚಾರ, ಪ್ರಸಾರ ಮೌಲ್ಯ ಮತ್ತು ಗರಿಷ್ಠ ಪ್ರೇಕ್ಷಕರನ್ನು ಸೆಳೆಯುವ ಮಾಸ್ಟರ್ ಪ್ಲಾನ್ನೊಂದಿಗೆ ಬಿಸಿಸಿಐ ಈ ಬಾರಿ ಜನವರಿ ತಿಂಗಳನ್ನೇ ಆಯ್ಕೆ ಮಾಡಿಕೊಂಡಿದೆ.
ಈ ಬಾರಿ ಟೂರ್ನಿಯನ್ನು ಬೆಂಗಳೂರು ಅಥವಾ ದೆಹಲಿಯಲ್ಲಿ ಆಯೋಜಿಸುತ್ತಿಲ್ಲ. ಬದಲಿಗೆ ಗುಜರಾತ್ನ ವಡೋದರಾ ಮತ್ತು ಮಹಾರಾಷ್ಟ್ರದ ಮುಂಬೈ ನಗರಗಳನ್ನು ಆತಿಥೇಯ ನಗರಗಳಾಗಿ ಆಯ್ಕೆ ಮಾಡಲಾಗಿದೆ. ಇದರಲ್ಲಿ ವಡೋದರಾದ ಕೋಟಂಬಿಯಲ್ಲಿರುವ ಅತ್ಯಾಧುನಿಕ ಹಾಗೂ ನೂತನ ಬಿಸಿಎ ಸ್ಟೇಡಿಯಂ ಮೊದಲ ಬಾರಿಗೆ WPL ಪಂದ್ಯಗಳಿಗೆ ಅದ್ಧೂರಿ ಆತಿಥ್ಯ ವಹಿಸುತ್ತಿದೆ.