ಆಕ್ಲೆಂಡ್, ನ.01 (DaijiworldNews/AA): ಭಾರತದಲ್ಲಿ ವಿರಾಟ್ ಕೊಹ್ಲಿ ಒಬ್ಬ ದೊಡ್ಡ ಸೂಪರ್ಸ್ಟಾರ್. ಅವರನ್ನು ಕ್ರಿಕೆಟ್ ದೇವರಂತೆ ಆರಾಧಿಸುವ ಅಭಿಮಾನಿಗಳಿದ್ದಾರೆ. ಅಷ್ಟೊಂದು ಜನಪ್ರಿಯತೆ ಹೊಂದಿದ್ದರೂ ಅವರು ತುಂಬಾ ಸರಳ ವ್ಯಕ್ತಿ ಎಂದು ನ್ಯೂಜಿಲೆಂಡ್ ತಂಡದ ವೇಗದ ಬೌಲರ್ ಜೇಕಬ್ ಡಫಿ ತಿಳಿಸಿದ್ದಾರೆ.

ಆಕ್ಲೆಂಡ್ನಲ್ಲಿ ನಡೆದ ಮಾಧ್ಯಮ ಸಂವಾದವೊಂದರಲ್ಲಿ ಮಾತನಾಡಿದ ಅವರು, "ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವದಂತಿರುವ ಕೊಹ್ಲಿ, ವಿದೇಶಿ ಆಟಗಾರರೊಂದಿಗೂ ಆತ್ಮೀಯವಾಗಿ ಬೆರೆಯುತ್ತಾರೆ. ಆರ್ಸಿಬಿ ತಂಡದಲ್ಲಿದ್ದ ನಮ್ಮಂತಹ ವಿದೇಶಿ ಆಟಗಾರರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದ್ದರು. ಅವರ ಈ ಗುಣ ನನಗೆ ತುಂಬಾ ಇಷ್ಟವಾಯಿತು. ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ಬಳಿಕ ಇದೀಗ ಎದುರಾಳಿಯಾಗಿ ಆಡುವ ಅವಕಾಶ ಸಿಗುತ್ತಿರುವುದು ಖುಷಿಯ ವಿಚಾರ" ಎಂದು ಸಂತಸ ವ್ಯಕ್ತಪಡಿಸಿದರು.
"ನಾನು ನಿನ್ನೆ ವಿರಾಟ್ ಕೊಹ್ಲಿ ಅವರನ್ನು ಭೇಟಿಯಾಗಿದ್ದೆ. ಅವರು ಜಿಮ್ನಲ್ಲಿ ಅಭ್ಯಾಸ ಮಾಡುತ್ತಿದ್ದರು. ಅಲ್ಲಿ ಅವರನ್ನು ಭೇಟಿಯಾಗಿದ್ದು ಖುಷಿ ನೀಡಿತು. ಅವರು ನನ್ನೊಂದಿಗೆ ತುಂಬಾ ಆತ್ಮೀಯವಾಗಿ ನಡೆದುಕೊಂಡರು" ಎಂದರು.
"ಕೊಹ್ಲಿ ಅವರ ಕೆಲಸದ ಮೇಲಿನ ಶ್ರದ್ಧೆ ಅದ್ಭುತವಾಗಿದೆ. ನೆಟ್ಸ್ನಲ್ಲಿ ಅವರು ಯಾವಾಗಲೂ ಮೊದಲು ಬ್ಯಾಟಿಂಗ್ ಅಭ್ಯಾಸಕ್ಕೆ ಬರುತ್ತಿದ್ದರು. ನಾನು ಕೂಡ ಮೊದಲ ಬೌಲರ್ ಆಗಿ ಅಭ್ಯಾಸ ಆರಂಭಿಸುತ್ತಿದ್ದೆ. ಹೀಗಾಗಿ ನಾವಿಬ್ಬರೂ ನೆಟ್ಸ್ನಲ್ಲಿ ಸಾಕಷ್ಟು ಸಮಯ ಪರಸ್ಪರ ಎದುರಾಗಿದ್ದೇವೆ. ಇದು ಉತ್ತಮ ಅನುಭವವಾಗಿತ್ತು. ಈಗ ಅವರಿಗೆ ನನ್ನ ಬೌಲಿಂಗ್ ಬಗ್ಗೆ ಸಾಕಷ್ಟು ತಿಳಿದಿದೆ. ಹಾಗೆಯೇ ನನಗೂ ಅವರ ಬ್ಯಾಟಿಂಗ್ ಬಗ್ಗೆ ಅರಿವಿದೆ. ಹೀಗಾಗಿ ಈ ಮುಖಾಮುಖಿಗೆ ಇಬ್ಬರೂ ಉತ್ತಮ ತಯಾರಿ ಮಾಡಿಕೊಂಡಿದ್ದೇವೆ" ಎಂದು ಹೇಳಿದರು.
"ಭಾರತದ ಪ್ರತಿಯೊಂದು ಪಿಚ್ನ ಸ್ವರೂಪವೂ ವಿಭಿನ್ನವಾಗಿರುತ್ತದೆ. ಅಂತಹ ಪಿಚ್ಗಳಲ್ಲಿ ಯಾವ ರೀತಿಯ ಲೈನ್ ಮತ್ತು ಲೆಂತ್ನಲ್ಲಿ ಬೌಲಿಂಗ್ ಮಾಡಬೇಕು, ಪರಿಸ್ಥಿತಿಗೆ ಅನುಗುಣವಾಗಿ ಹೇಗೆ ಬದಲಾವಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಕೊಹ್ಲಿ ಸಾಕಷ್ಟು ಮಾಹಿತಿ ನೀಡಿದ್ದರು. ನಾನು ಯಾವ ರೀತಿ ಬೌಲಿಂಗ್ ಮಾಡಬಹುದು ಎಂಬ ಸಲಹೆಗಳನ್ನೂ ನೀಡಿದ್ದರು. ಅವರಿಂದ ಸಿಕ್ಕ ಇಂತಹ ಸಣ್ಣಪುಟ್ಟ ಸಲಹೆಗಳು ನನಗೆ ಸಾಕಷ್ಟು ಉಪಯುಕ್ತವಾಗಿವೆ" ಎಂದು ಅಭಿಪ್ರಾಯಪಟ್ಟರು.