ಮುಂಬೈ, ಅ.30 (DaijiworldNews/AK): 2026ರ ಎಸಿಸಿ ಪುರುಷರ ಅಂಡರ್-19 ಏಷ್ಯಾಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ನವೆಂಬರ್ 5ರಿಂದ ಆರಂಭವಾಗಲಿರುವ ಈ ಟೂರ್ನಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಹಾಗೂ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಆಯ್ಕೆಯಾಗಿದ್ದಾರೆ.

ಉತ್ತರಾಖಂಡದ ಯುವ ಆಟಗಾರ ಲಕ್ಷ್ಯ ರಾಯಚಂದಾನಿ ಅವರಿಗೆ ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಸಾಮರ್ಥ್ಯ ಹೊಂದಿರುವ ಯಶೋವರ್ಧನ್ ಸಿಂಗ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧ ಸರಣಿ ಆಡಿದ್ದ ಹಲವು ಆಟಗಾರರಿಗೆ ಏಷ್ಯಾಕಪ್ ತಂಡದಲ್ಲೂ ಅವಕಾಶ ಕಲ್ಪಿಸಲಾಗಿದೆ.
ಅಂಡರ್-19 ಏಷ್ಯಾಕಪ್ಗೆ ಭಾರತ ತಂಡ:
ಲಕ್ಷ್ಯ ರಾಯಚಂದಾನಿ (ನಾಯಕ), ಆರ್ಯವೀರ್ ಸೆಹ್ವಾಗ್, ವಿಕೆ ವಿನೀತ್, ಯಶೋವರ್ಧನ್ ಸಿಂಗ್, ಕುಶಾಗ್ರ ಓಜಾ, ಅರ್ಜುನ್ ರಜಪೂತ್, ಮನಲ್ ಚೌಹಾಣ್, ಅನ್ವಯ್ ದ್ರಾವಿಡ್, ರಜತ್ ಬಾಘೇಲ್, ವಿ. ಯಶ್ವಿರ್, ಆರ್ಯನ್ ಸಾವ್ಸಾನಿ, ಮೋಹಿತ್ ಉಲ್ವಾ, ಕಾವ್ಯಾ ಪಟೇಲ್, ಶವಿನ್ ವಿನೋದ್ ಮತ್ತು ಇಶಾನ್ ಸೂದ್.
ಈ ಬಾರಿಯ ಅಂಡರ್-19 ಏಷ್ಯಾಕಪ್ನಲ್ಲಿ ಭಾರತ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಭಾರತಕ್ಕೆ ಯುಎಇ, ನೇಪಾಳ ಹಾಗೂ ಪಾಕಿಸ್ತಾನ ತಂಡಗಳು ಎದುರಾಗಲಿವೆ. ಇನ್ನು ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಮಲೇಷ್ಯಾ ತಂಡಗಳಿವೆ. ಎರಡೂ ಗುಂಪುಗಳಿಂದ ತಲಾ ಎರಡು ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯಲಿವೆ. ನವೆಂಬರ್ 12ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ನವೆಂಬರ್ 14ರಂದು ಫೈನಲ್ ಪಂದ್ಯ ಆಯೋಜಿಸಲಾಗಿದೆ.
ಭಾರತದ ಪಂದ್ಯಗಳ ವೇಳಾಪಟ್ಟಿ
ಭಾರತ ಅಂಡರ್-19 ತಂಡ ತನ್ನ ಮೊದಲ ಪಂದ್ಯವನ್ನು ನವೆಂಬರ್ 6ರಂದು ನೇಪಾಳ ವಿರುದ್ಧ ಆಡಲಿದೆ. ಬಳಿಕ ನವೆಂಬರ್ 8ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ನವೆಂಬರ್ 10ರಂದು ಯುಎಇ ವಿರುದ್ಧ ಕೊನೆಯ ಗುಂಪು ಹಂತದ ಪಂದ್ಯ ನಡೆಯಲಿದೆ. ಈ ಮೂರೂ ಪಂದ್ಯಗಳು ಒಮಾನ್ನ ಮಸ್ಕತ್ನಲ್ಲಿ ನಡೆಯಲಿವೆ.