ಮುಂಬೈ, ಅ.29 (DaijiworldNews/AK): ಫುಟ್ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಯಾರು ಎಂಬ ದಶಕಗಳ ವಿವಾದಕ್ಕೆ ಅಭಿಮಾನಿಗಳು ಕೊನೆಗೂ ತೀರ್ಪು ನೀಡಿದ್ದಾರೆ. ಲಿಯೋನೆಲ್ ಮೆಸ್ಸಿ ವಿರುದ್ಧದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಭರ್ಜರಿ ಜಯ ಸಾಧಿಸುವ ಮೂಲಕ ಚೊಚ್ಚಲ ಸಾರ್ವಕಾಲಿಕ ಶ್ರೇಷ್ಠ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬ್ಯಾಲನ್ ಡಿ’ಓರ್ ಪ್ರಶಸ್ತಿಯ 70ನೇ ವರ್ಷಾಚರಣೆಯ ನೆನಪಿಗಾಗಿ ಫ್ರಾನ್ಸ್ ಫುಟ್ಬಾಲ್ ಮತ್ತು UEFA ಜಂಟಿಯಾಗಿ ಈ ವಿಶೇಷ ಜಾಗತಿಕ ಡಿಜಿಟಲ್ ಮತದಾನವನ್ನು ಆಯೋಜಿಸಿದ್ದವು. ಇತಿಹಾಸದಲ್ಲೇ ಅತ್ಯಂತ ವೈಭವಯುತ ಪ್ರದರ್ಶನ ನೀಡಿದ 10 ದಿಗ್ಗಜ ಆಟಗಾರರ ಶಾರ್ಟ್ಲಿಸ್ಟ್ನಲ್ಲಿ, ಅಭಿಮಾನಿಗಳು ರೊನಾಲ್ಡೊ ಅವರ ಸಾಂಪ್ರದಾಯಿಕ ಸೀಸನ್ ಅನ್ನು ಜಗತ್ತಿನ ಶ್ರೇಷ್ಠ ಅಭಿಯಾನ ಎಂದು ಆರಿಸಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ವೃತ್ತಿಜೀವನದ ಮೊದಲ ಬ್ಯಾಲನ್ ಡಿ’ಓರ್ ಗೆದ್ದಿದ್ದ ಮ್ಯಾಂಚೆಸ್ಟರ್ ಯುನೈಟೆಡ್ನ 2007-08ರ ಅದ್ಭುತ ಸೀಸನ್ಗಾಗಿ ಅತಿ ಹೆಚ್ಚು ಮತಗಳನ್ನು ಪಡೆದು ಮೊದಲ ಸ್ಥಾನಕ್ಕೇರಿದ್ದಾರೆ. ಆ ಸೀಸನ್ನಲ್ಲಿ ರೊನಾಲ್ಡೊ ಒಟ್ಟು 42 ಗೋಲುಗಳನ್ನು ಬಾರಿಸಿದ್ದಲ್ಲದೆ, ಕ್ಲಬ್ಗೆ ಪ್ರೀಮಿಯರ್ ಲೀಗ್ ಮತ್ತು UEFA ಚಾಂಪಿಯನ್ಸ್ ಲೀಗ್ ಎರಡೂ ಟ್ರೋಫಿಗಳನ್ನು ತಂದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ಮತ್ತೊಂದೆಡೆ, ಅರ್ಜೆಂಟೀನಾದ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅವರು ಬಾರ್ಸಿಲೋನಾ ಕ್ಲಬ್ ಪರ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ದಾಖಲೆಯ 91 ಗೋಲುಗಳನ್ನು ಹೊಡೆದಿದ್ದ 2012ರ ಅಭಿಯಾನಕ್ಕಾಗಿ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಅಂದರೆ ಕ್ರಿಸ್ಟಿಯಾನೊ ರೊನಾಲ್ಡೊ 2008ರ ಮ್ಯಾಂಚೆಸ್ಟರ್ ಯುನೈಟೆಡ್ನಲ್ಲಿನ ಪರಾಕ್ರಮಕ್ಕೆ ಅಭಿಮಾನಿಗಳು ಬಹುಪರಾಕ್ ಎಂದಿದ್ದಾರೆ. ಈ ಮೂಲಕ ಸಾರ್ವಕಾಲಿಕ ಶ್ರೇಷ್ಠ ಬ್ಯಾಲನ್ ಡಿ’ಓರ್ ಪ್ರಶಸ್ತಿಗೆ ರೊನಾಲ್ಡೊ ಅವರನ್ನು ಆಯ್ಕೆ ಮಾಡಿದ್ದಾರೆ.