ನವದೆಹಲಿ, ಅ.28 (DaijiworldNews/AA): ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಮೂರು ಬಾರಿ ಚಿನ್ನದ ಪದಕ ಗೆದ್ದಿದ್ದ ಕ್ರೀಡಾಪಟು ನೀರಜ್ ಯಾದವ್ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನವದೆಹಲಿಯ ತಮ್ಮ ನಿವಾಸದಲ್ಲಿ ನೀರಜ್ ಅವರು ಬುಧವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಅವರ ಸಾವಿಗೆ ನಿಖರವಾದ ಕಾರಣ ಏನು ಎಂಬುದು ತಿಳಿದುಬಂದಿಲ್ಲ ಎಂದು ಪೊಲೀಸರ ಮಾಹಿತಿ ನೀಡಿದ್ದಾರೆ.
ಎಫ್55 ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ನೀರಜ್ ಯಾದವ್ ಡೋಪಿಂಗ್ ನಿಷೇಧದಿಂದಾಗಿ ಇತ್ತೀಚಿಗೆ ಐಚಿ-ನಗೋಯಾದಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಂಡಿದ್ದರು. ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಭಾರತೀಯ ಪ್ಯಾರಾ ಅಥ್ಲೀಟಿಕ್ಸ್ ತಂಡದ ಮುಖ್ಯ ತರಬೇತುದಾರ ಎಸ್.ಸತ್ಯನಾರಾಯಣ ಅವರು ನೀರಜ್ ಯಾದವ್ ಸಾವಿನ ಸುದ್ದಿಯನ್ನು ಖಚಿತಪಡಿಸಿ, ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಭಾರತದ ಪ್ಯಾರಾ-ಅಥ್ಲೀಟ್ಗಳಲ್ಲಿ ಒಬ್ಬರಾಗಿದ್ದ ನೀರಜ್ ಯಾದವ್ ಅವರು 2018ರ ಜಕಾರ್ತ ಆವೃತ್ತಿಯಲ್ಲಿ ಜಾವೆಲಿನ್ ಎಸೆತದಲ್ಲಿ ಪ್ರಶಸ್ತಿ ಗೆದ್ದಿದ್ದರು. ನಂತರ 2023ರಲ್ಲಿ ಹ್ಯಾಂಗ್ಝೌನಲ್ಲಿ ನಡೆದ ಕ್ರೀಡಾಕೂಟದಲ್ಲಿ ಜಾವೆಲಿನ್ ಮತ್ತು ಡಿಸ್ಕಸ್ ಎಸೆತ ಎರಡರಲ್ಲೂ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದರು.