ಲಂಡನ್, ಅ.27 (DaijiworldNews/AA): ಫುಟ್ಬಾಲ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ವೈಯಕ್ತಿಕ ಗೌರವವಾದ 2026ರ ಸಾಲಿನ 'ಬ್ಯಾಲನ್ ಡಿ'ಓರ್' ಪ್ರಶಸ್ತಿಯನ್ನು ಇಂಗ್ಲೆಂಡ್ ತಂಡದ ನಾಯಕ ಹಾಗೂ ಬಾಯರ್ನ್ ಮ್ಯೂನಿಚ್ ಕ್ಲಬ್ನ ಮುಂಚೂಣಿ ಆಟಗಾರ ಹ್ಯಾರಿ ಕೇನ್ ತಮ್ಮದಾಗಿಸಿಕೊಂಡಿದ್ದಾರೆ.

ಲಂಡನ್ನ ಪ್ರತಿಷ್ಠಿತ ಪಲ್ಲಾಡಿಯಮ್ನಲ್ಲಿ ನಡೆದ 70ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹ್ಯಾರಿ ಕೇನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಫ್ರಾನ್ಸ್ನ ಕಿಲಿಯನ್ ಎಂಬಾಪೆ ಮತ್ತು ಸ್ಪೇನ್ನ ಲಾಮಿನ್ ಯಮಾಲ್ ಅವರನ್ನು ಹಿಂದಿಕ್ಕಿ ಕೇನ್ ಈ ಬಾರಿಯ ಬ್ಯಾಲನ್ ಡಿ'ಓರ್ ಪ್ರಶಸ್ತಿ ಮುಡಿಕೇರಿಸಿಕೊಂಡಿದ್ದಾರೆ.
ಕಳೆದ 2025-26ರ ಸೀಸನ್ನಲ್ಲಿ ಕ್ಲಬ್ ಮತ್ತು ದೇಶದ ಪರವಾಗಿ ಬರೊಬ್ಬರಿ 73 ಗೋಲುಗಳನ್ನು ಬಾರಿಸುವ ಮೂಲಕ ಹ್ಯಾರಿ ಕೇನ್ ಅಗ್ರಸ್ಥಾನ ಪಡೆದಿದ್ದಾರೆ. ಬಾಯರ್ನ್ ಮ್ಯೂನಿಚ್ ತಂಡವು ಡೊಮೆಸ್ಟಿಕ್ ಟ್ರೆಬಲ್ ಗೆಲ್ಲುವಲ್ಲಿ ಮತ್ತು ಇಂಗ್ಲೆಂಡ್ ತಂಡವು ಫಿಫಾ ವಿಶ್ವಕಪ್ನ ಸೆಮಿಫೈನಲ್ ತಲುಪುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ಇದೇ ಸಮಾರಂಭದಲ್ಲಿ ಹ್ಯಾರಿ ಕೇನ್ ಅವರು ಬ್ಯಾಲನ್ ಡಿ'ಓರ್ ಪ್ರಶಸ್ತಿ ಜೊತೆಗೆ ಗರ್ಡ್ ಮುಲ್ಲರ್ ಟ್ರೋಫಿ (ವರ್ಷದ ಅತ್ಯುತ್ತಮ ಸ್ಟ್ರೈಕರ್) ಪ್ರಶಸ್ತಿಯನ್ನು ಸ್ವೀಕರಿಸಿದರು. ಇದರೊಂದಿಗೆ ಈ ಎರಡೂ ಪ್ರಶಸ್ತಿಗಳನ್ನು ಒಂದೇ ರಾತ್ರಿ ಗೆದ್ದ ವಿಶ್ವದ ಮೊದಲ ಆಟಗಾರ ಎಂಬ ಎಂಬ ದಾಖಲೆ ನಿರ್ಮಿಸಿದ್ದಾರೆ.
ಕೇನ್ ಈ ಪ್ರಶಸ್ತಿ ಪಡೆಯುವ ಮೂಲಕ 25 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆ ಬಿದ್ದಿದೆ. 2001ರಲ್ಲಿ ಮೈಕಲ್ ಓವನ್ ನಂತರ ಈ ಪ್ರಶಸ್ತಿ ಗೆದ್ದ ಮೊದಲ ಇಂಗ್ಲೆಂಡ್ ಆಟಗಾರ ಎಂಬ ಹೆಗ್ಗಳಿಕೆಗೆ ಕೇನ್ ಭಾಜನರಾಗಿದ್ದಾರೆ.