ನವದೆಹಲಿ, ಸೆ.21 (DaijiworldNews/TA): ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಅವರು ರಾಷ್ಟ್ರೀಯ ಲೋಕದಳ ಅಧ್ಯಕ್ಷ ಜಯಂತ್ ಚೌಧರಿ ಅವರನ್ನು ಭೇಟಿಯಾಗಿರುವುದು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ದೆಹಲಿಯಲ್ಲಿ ಭಾನುವಾರ ನಡೆದ ಈ ಭೇಟಿಯ ಫೋಟೋವನ್ನು ಜಯಂತ್ ಚೌಧರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ, ಶಮಿ ರಾಜಕೀಯ ಪ್ರವೇಶಿಸಲಿದ್ದಾರೆಯೇ ಎಂಬ ಊಹಾಪೋಹಗಳು ಮತ್ತಷ್ಟು ಹೆಚ್ಚಾಗಿವೆ.

ಮುಂದಿನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶಮಿ ತಮ್ಮ ತವರು ಜಿಲ್ಲೆಯಾದ ಅಮ್ರೋಹಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಚರ್ಚೆ ನಡೆಯುತ್ತಿದೆ. ಆರ್ಎಲ್ಡಿ ಮೂಲಕ ಶಮಿ ಅಥವಾ ಅವರ ಕುಟುಂಬದ ಸದಸ್ಯರು ಚುನಾವಣೆಗೆ ಇಳಿಯುವ ಸಾಧ್ಯತೆಯ ಬಗ್ಗೆಯೂ ವರದಿಗಳು ಪ್ರಕಟವಾಗಿವೆ. ಆದರೆ, ಶಮಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಅಥವಾ ಆರ್ಎಲ್ಡಿ ಅಭ್ಯರ್ಥಿಯಾಗಲಿದ್ದಾರೆ ಎಂಬುದನ್ನು ಪಕ್ಷವಾಗಲಿ, ಶಮಿಯಾಗಲಿ ಅಧಿಕೃತವಾಗಿ ದೃಢಪಡಿಸಿಲ್ಲ.
ಮೊಹಮ್ಮದ್ ಶಮಿ ಅಮ್ರೋಹಾ ಸದರ್ ಪ್ರದೇಶದ ಸಹಸ್ಪುರ ಅಲಿನಗರದವರು. ಹೀಗಾಗಿ ಅವರ ತವರು ಕ್ಷೇತ್ರದಿಂದಲೇ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ ಆರಂಭವಾಗಿದೆ. ಶಮಿ ಹಾಗೂ ಜಯಂತ್ ಚೌಧರಿ ಭೇಟಿಯ ನಂತರ ಅಮ್ರೋಹಾದ ರಾಜಕೀಯ ವಲಯದಲ್ಲಿ ಈ ಕುರಿತು ಚರ್ಚೆಗಳು ತೀವ್ರಗೊಂಡಿವೆ. ಆದರೆ ಈ ಭೇಟಿ ಚುನಾವಣಾ ಉದ್ದೇಶಕ್ಕಾಗಿಯೇ ನಡೆದಿತ್ತು ಎಂಬುದನ್ನು ಅಧಿಕೃತವಾಗಿ ಯಾರೂ ಹೇಳಿಲ್ಲ. ಕೆಲವು ವರದಿಗಳಲ್ಲಿ ಶಮಿ ಸ್ವತಃ ಸ್ಪರ್ಧಿಸುವ ಬದಲು ಅವರ ಸಹೋದರನ ಹೆಸರೂ ಚರ್ಚೆಯಲ್ಲಿದೆ ಎಂದು ಹೇಳಲಾಗಿದೆ. ಹೀಗಾಗಿ ಸದ್ಯಕ್ಕೆ ಶಮಿ ಅವರ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲ.
ಮೊಹಮ್ಮದ್ ಶಮಿ ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ಚರ್ಚೆ ಇದೇ ಮೊದಲಲ್ಲ. ಈ ಹಿಂದೆಯೂ ಚುನಾವಣೆ ಸಂದರ್ಭದಲ್ಲಿ ಶಮಿ ರಾಜಕೀಯಕ್ಕೆ ಬರಲಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಆದರೆ ಅವುಗಳಿಗೆ ಯಾವುದೇ ಅಧಿಕೃತ ದೃಢೀಕರಣ ದೊರೆತಿರಲಿಲ್ಲ. ಸದ್ಯ ಜಯಂತ್ ಚೌಧರಿ ಅವರೊಂದಿಗಿನ ಭೇಟಿಯಿಂದ ಮತ್ತೊಮ್ಮೆ ಈ ಚರ್ಚೆ ಮುನ್ನೆಲೆಗೆ ಬಂದಿದೆ. ಶಮಿ ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಪ್ರವೇಶಿಸುತ್ತಾರೆಯೇ ಅಥವಾ ಚುನಾವಣಾ ಕಣಕ್ಕೆ ಇಳಿಯುತ್ತಾರೆಯೇ ಎಂಬುದಕ್ಕೆ ಅವರ ಅಧಿಕೃತ ನಿಲುವು ಸ್ಪಷ್ಟವಾಗಬೇಕಿದೆ.