ಜಪಾನ್,ಸೆ.21 (DaijiworldNews/AK):ಏಷ್ಯನ್ ಗೇಮ್ಸ್ 2026ರ ಮಹಿಳಾ ಟಿ20 ಟೂರ್ನಿಯ ಫೈನಲ್ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಸೆಪ್ಟೆಂಬರ್ 22ರ ಮಂಗಳವಾರದಂದು ಜಪಾನ್ನ ನಿಶ್ಶಿನ್ನಲ್ಲಿರುವ ಐಚಿ ಪ್ರಿಫೆಕ್ಚರಲ್ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಈ ಹಣಾಹಣಿಯಲ್ಲಿ ಗೆಲ್ಲುವ ತಂಡ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರೆ, ಸೋಲುವ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಗುತ್ತದೆ. ಅಂದರೆ ಉಭಯ ತಂಡಗಳಿಗೂ ಏಷ್ಯನ್ ಗೇಮ್ಸ್ ಪದಕ ಖಚಿತವಾದಂತಾಗಿದೆ. ಆದರೆ ಎರಡೂ ತಂಡಗಳ ಆಟಗಾರ್ತಿಯರು ಜಿದ್ದಾಜಿದ್ದಿನ ಹೋರಾಟ ನಡೆಸಿ ಬಂಗಾರದ ಪದಕಕ್ಕೆ ಕೊರಳೊಡ್ಡಲು ತುದಿಗಾಲಲ್ಲಿ ನಿಂತಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ 114 ರನ್ಗಳ ಬೃಹತ್ ಗೆಲುವು ದಾಖಲಿಸಿದ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಪೂರ್ಣ ಆತ್ಮವಿಶ್ವಾಸದಲ್ಲಿದೆ. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಕೇವಲ 49 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಫಾರ್ಮ್ಗೆ ಮರಳಿರುವುದು ತಂಡದ ಬ್ಯಾಟಿಂಗ್ ಶಕ್ತಿಯನ್ನು ಹೆಚ್ಚಿಸಿದೆ. ಇನ್ನು ಬೌಲಿಂಗ್ನಲ್ಲಿ ದೀಪ್ತಿ ಶರ್ಮಾ ಮತ್ತು ನಂದಿನಿ ಶರ್ಮಾ ಕರಾರುವಾಕ್ ದಾಳಿ ಸಂಘಟಿಸುತ್ತಿದ್ದು, ಲಂಕಾ ಬ್ಯಾಟರ್ಗಳಿಗೆ ಕಡಿವಾಣ ಹಾಕಲು ಸಜ್ಜಾಗಿದ್ದಾರೆ. ಸ್ಮೃತಿ ಮಂಧಾನ ಮತ್ತು ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಅನುಭವ ತಂಡಕ್ಕೆ ದೊಡ್ಡ ಬಲವಾಗಿದೆ.
ಭಾರತೀಯ ಕಾಲಮಾನ ಬೆಳಗ್ಗೆ 10:30ಕ್ಕೆ ಪಂದ್ಯ ಆರಂಭವಾಗಲಿದ್ದು, 10:00 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.