ನವದೆಹಲಿ, ಸೆ. 08 (DaijiworldNews/AK):ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಸರಣಿಗಾಗಿ ಭಾರತದ ಅಂಡರ್-19 ತಂಡದಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಿದೆ.

ವಯಸ್ಸು ವಂಚನೆ ಪ್ರಕರಣದಲ್ಲಿ ಸಿಲುಕಿರುವ ಬೆಂಗಾಲ್ ತಂಡದ ಲೆಗ್-ಸ್ಪಿನ್ನರ್ ರೋಹಿತ್ ಯಾದವ್ ಅವರ ಮೇಲೆ ಬಿಸಿಸಿಐ ಎರಡು ವರ್ಷಗಳ ನಿಷೇಧ ಹೇರಿದ್ದು, ಅವರನ್ನು ತಂಡದಿಂದ ತಕ್ಷಣವೇ ಕೈಬಿಡಲಾಗಿದೆ.
ಆಸ್ಟ್ರೇಲಿಯಾ ಕಿರಿಯರ ತಂಡದ ವಿರುದ್ಧ ರಾಜ್ಕೋಟ್ ಮತ್ತು ಅಹಮದಾಬಾದ್ನಲ್ಲಿ ನಡೆಯಲಿರುವ ಏಕದಿನ ಹಾಗೂ ಮಲ್ಟಿ-ಡೇ (ನಾಲ್ಕು ದಿನಗಳ) ಪಂದ್ಯಗಳ ಸರಣಿಗೆ ರೋಹಿತ್ ಯಾದವ್ ಆಯ್ಕೆಯಾಗಿದ್ದರು. ಆದರೆ ಬಿಸಿಸಿಐನ ವಯಸ್ಸು ಪರಿಶೀಲನಾ ವಿಭಾಗ ಮತ್ತು ಬೆಂಗಾಲ್ ಕ್ರಿಕೆಟ್ ಸಂಸ್ಥೆ ಜಂಟಿಯಾಗಿ ನಡೆಸಿದ ದಾಖಲೆಗಳ ಪರಿಶೀಲನೆಯಲ್ಲಿ ರೋಹಿತ್ ಅವರ ವಯಸ್ಸಿನ ದಾಖಲೆಗಳಲ್ಲಿ ಭಾರಿ ವ್ಯತ್ಯಾಸಗಳು ಪತ್ತೆಯಾಗಿವೆ.
ತನಿಖೆಯ ವೇಳೆ ರೋಹಿತ್ ಯಾದವ್ ಹೆಸರಿನಲ್ಲಿ ಮೂರು ಬೇರೆ ಬೇರೆ ಜನನ ಪ್ರಮಾಣ ಪತ್ರಗಳು (2007, 2009 ಮತ್ತು 2010ರ ಜನನ ವರ್ಷಗಳು) ಇರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ಅವರ ಆಧಾರ್ ಕಾರ್ಡ್ ವಿವರಗಳನ್ನು ಸಹ ಹಲವು ಬಾರಿ ತಿದ್ದಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಅವರನ್ನು ದೇಶಿ ಕ್ರಿಕೆಟ್ನಿಂದ ಎರಡು ವರ್ಷಗಳ ಕಾಲ ಅಮಾನತುಗೊಳಿಸಿದೆ.