ನವದೆಹಲಿ, ಸೆ. 07 (DaijiworldNews/TA): ಇಂಡಿಯನ್ ಪ್ರೀಮಿಯರ್ ಲೀಗ್ನ (IPL) ಅತ್ಯಂತ ಯಶಸ್ವಿ ಬ್ಯಾಟರ್ಗಳಲ್ಲಿ ಒಬ್ಬರಾಗಿರುವ ‘ಮಿಸ್ಟರ್ ಐಪಿಎಲ್’ ಖ್ಯಾತಿಯ ಸುರೇಶ್ ರೈನಾ, ಸದ್ಯ ಚರ್ಚೆಯಲ್ಲಿರುವ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಕಾಶ್ ಚೋಪ್ರಾ ಅವರ ‘ಬೈಠಕ್ ಅಂಡ್ ಬೋಲ್’ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ರೈನಾ, ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಟಿ20 ಕ್ರಿಕೆಟ್ನ ಬ್ಯಾಟಿಂಗ್ ಮತ್ತು ಬೌಲಿಂಗ್ ನಡುವಿನ ಸಮತೋಲನವನ್ನು ಹದಗೆಡಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ನಾನು ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಸಂಪೂರ್ಣವಾಗಿ ವಿರೋಧಿಸುತ್ತೇನೆ. ಈ ನಿಯಮದಿಂದಾಗಿ ಬೌಲರ್ಗಳಿಗೆ ಪಂದ್ಯದಲ್ಲಿ ಯಾವುದೇ ಬೆಲೆ ಇಲ್ಲದಂತಾಗಿದೆ” ಎಂದು ರೈನಾ ಹೇಳಿದ್ದಾರೆ.

ಹೆಚ್ಚುವರಿ ಬ್ಯಾಟರ್ರನ್ನು ಬಳಸಿಕೊಳ್ಳುವ ಅವಕಾಶ ಇರುವುದರಿಂದ ತಂಡಗಳು ಹೆಚ್ಚಿನ ಅಪಾಯವಿಲ್ಲದೆ ಬ್ಯಾಟಿಂಗ್ ನಡೆಸುತ್ತಿವೆ. ಪರಿಣಾಮವಾಗಿ ಟಿ20 ಪಂದ್ಯಗಳಲ್ಲಿ ಬೃಹತ್ ಮೊತ್ತಗಳು ದಾಖಲಾಗುವ ಸಾಧ್ಯತೆ ಹೆಚ್ಚುತ್ತಿದೆ. ಇದು ಬೌಲರ್ಗಳ ಮೇಲಿನ ಒತ್ತಡವನ್ನೂ ಹೆಚ್ಚಿಸುತ್ತಿದೆ ಎಂಬುದು ರೈನಾ ಅವರ ವಾದ. ಸದ್ಯ ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಐಪಿಎಲ್ ಸೇರಿದಂತೆ ಕೆಲವು ಫ್ರಾಂಚೈಸಿ ಲೀಗ್ಗಳಲ್ಲಿ ಜಾರಿಯಲ್ಲಿದೆ. ಆದರೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಈ ನಿಯಮವನ್ನು ಬಳಸಲಾಗುತ್ತಿಲ್ಲ.
ಇಂಪ್ಯಾಕ್ಟ್ ಪ್ಲೇಯರ್ ನಿಯಮ ಕೇವಲ ಬೌಲರ್ಗಳಿಗೆ ಮಾತ್ರವಲ್ಲದೆ ಆಲ್ರೌಂಡರ್ಗಳ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ರೈನಾ ಹೇಳಿದ್ದಾರೆ. ತಂಡಗಳು ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬ್ಯಾಟರ್ ಅಥವಾ ಬೌಲರ್ರನ್ನು ಬದಲಿಯಾಗಿ ಬಳಸಿಕೊಳ್ಳುವುದರಿಂದ ಕೆಲ ಆಟಗಾರರು ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಿದ ಬಳಿಕ ಫೀಲ್ಡಿಂಗ್ನಿಂದ ಹೊರಗುಳಿಯುವ ಪರಿಸ್ಥಿತಿ ಎದುರಾಗುತ್ತಿದೆ. ಇದರಿಂದ ಆಟಗಾರರ ಒಟ್ಟಾರೆ ಕೌಶಲ್ಯ ಹಾಗೂ ಫಿಟ್ನೆಸ್ ಅಭಿವೃದ್ಧಿಗೆ ಧಕ್ಕೆಯಾಗಬಹುದು ಎಂಬುದು ರೈನಾ ಅವರ ಅಭಿಪ್ರಾಯ. ಇಂಪ್ಯಾಕ್ಟ್ ಪ್ಲೇಯರ್ ನಿಯಮದ ವಿರುದ್ಧ ಧ್ವನಿ ಎತ್ತಿರುವ ಪ್ರಮುಖ ಕ್ರಿಕೆಟಿಗರಲ್ಲಿ ರೈನಾ ಕೂಡ ಇದೀಗ ಸೇರಿದ್ದಾರೆ. ಈ ಹಿಂದೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಅಕ್ಷರ್ ಪಟೇಲ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಈ ನಿಯಮದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.
ಒಂದೆಡೆ ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಪಂದ್ಯಗಳಿಗೆ ಮತ್ತಷ್ಟು ರೋಚಕತೆ ಹಾಗೂ ತಂತ್ರಗಾರಿಕೆಯನ್ನು ನೀಡುತ್ತಿದೆ ಎಂಬ ಅಭಿಪ್ರಾಯವಿದ್ದರೆ, ಮತ್ತೊಂದೆಡೆ ಇದು ಬ್ಯಾಟರ್ಗಳಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟು ಬ್ಯಾಟ್-ಬಾಲ್ ಸಮತೋಲನವನ್ನು ಹಾಳು ಮಾಡುತ್ತಿದೆ ಎಂಬ ಟೀಕೆಗಳೂ ಕೇಳಿಬರುತ್ತಿವೆ. ಹೀಗಾಗಿ ಮುಂಬರುವ ಐಪಿಎಲ್ ಆವೃತ್ತಿಗಳಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಮುಂದುವರಿಯಲಿದೆಯೇ ಅಥವಾ ಇದರಲ್ಲಿ ಬದಲಾವಣೆ ತರಲಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.