ದೆಹಲಿ, ಸೆ. 04 (DaijiworldNews/AA): ವಯಸ್ಸಿನ ವಂಚನೆ ಮೂಲಕ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ ಆಟಗಾರರ ವಿರುದ್ಧ ಬಿಸಿಸಿಐ ಕಠಿಣ ಕ್ರಮಕ್ಕೆ ಮುಂದಾಗಿದೆ. ಅದರಂತೆ ವಯಸ್ಸಿನ ವಂಚನೆ ಮತ್ತು ನಕಲಿ ದಾಖಲೆಗಳನ್ನು ನೀಡಿದ್ದ ಬರೋಬ್ಬರಿ 65 ಆಟಗಾರರಿಗೆ ಬಿಸಿಸಿಐ 2 ವರ್ಷ ನಿಷೇಧದ ಶಿಕ್ಷೆ ವಿಧಿಸಿದೆ.

ಈ 65 ಆಟಗಾರರು ಬಂಗಳಾ ಕ್ರಿಕೆಟ್ ಸಂಸ್ಥೆಯಲ್ಲಿ ನೋಂದಾಯಿತರಾಗಿದ್ದವರು ಎನ್ನಲಾಗಿದೆ. ಬಂಗಾಳ ಕ್ರಿಕೆಟ್ ಸಂಸ್ಥೆ ಅಧಿಕೃತ ತನಿಖೆಯ ನಂತರ ಒಟ್ಟು 65 ಆಟಗಾರರ ನೋಂದಣಿ ಮತ್ತು ವರ್ಗಾವಣೆಯನ್ನು ನಿಷೇಧಿಸಿದೆ. ಈ ಹಿನ್ನೆಲೆ ಎಲ್ಲಾ 65 ಕ್ರಿಕೆಟಿಗರು ಮುಂಬರುವ ಎರಡು ದೇಶೀಯ ಆವೃತ್ತಿಗಳ ಯಾವುದೇ ಪಂದ್ಯಾವಳಿಗಳಲ್ಲಿ ಭಾಗವಹಿಸುವಂತಿಲ್ಲ.
ವಯಸ್ಸಿನ ವಂಚನೆ ಮತ್ತು ನಕಲಿ ದಾಖಲೆಗಳನ್ನು ನೀಡಿದ್ದ 65 ಆಟಗಾರ ಪೈಕಿ ವೇಗದ ಬೌಲರ್ ರವಿ ಕುಮಾರ್ ಮತ್ತು ಲೆಗ್-ಸ್ಪಿನ್ನರ್ ರೋಹಿತ್ ಯಾದವ್ ಕೂಡ ಸೇರಿದ್ದಾರೆ. ಇವರಿಬ್ಬರು 2022 ರ 19 ವರ್ಷದೊಳಗಿನವರ ಭಾರತ ವಿಶ್ವಕಪ್ ತಂಡದಲ್ಲಿ ಆಡಿದ್ದರು.
ವಯಸ್ಸಿನ ವಂಚನೆಯನ್ನು ತಪ್ಪಿಸುವ ಸಲುವಾಗಿ ಬಿಸಿಸಿಐ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಅಲ್ಲದೆ ಆಟಗಾರರ ನಿಖರವಾದ ವಯಸ್ಸನ್ನು ಪತ್ತೆ ಹಚ್ಚುವ ಸಲುವಾಗಿ ಹಲವು ಪರೀಕ್ಷೆಗಳನ್ನು ನಡೆಸುತ್ತಿದೆ. ಆದಾಗ್ಯೂ ಕೆಲ ಆಟಗಾರರು ವಯಸ್ಸಿನ ವಂಚನೆ ಮೂಲಕ ತಂಡದಲ್ಲಿ ಸ್ಥಾನ ಗಳಿಸುತ್ತಿದ್ದಾರೆ.