ದೆಹಲಿ, ಸೆ. 03 (DaijiworldNews/AA): 2026ರ ಏಷ್ಯನ್ ಗೇಮ್ಸ್ ಪಂದ್ಯಾವಳಿಯಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ವಿ.ವಿ.ಎಸ್. ಲಕ್ಷ್ಮಣ್ ನೇಮಕಗೊಂಡಿದ್ದಾರೆ.

ಜಪಾನ್ನ ಐಚಿ-ನಗೋಯಾದಲ್ಲಿ 2026ರ ಏಷ್ಯನ್ ಗೇಮ್ಸ್ ಪಂದ್ಯಾವಳಿ ನಡೆಯಲಿದೆ. ಈ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಭಾರತೀಯ ಕ್ರೀಡಾ ಸಚಿವಾಲಯದ ಅಧಿಕೃತ ಅನುಮೋದನೆ ನೀಡಿದ ಹಿನ್ನೆಲೆ ಲಕ್ಷ್ಮಣ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಏಷ್ಯನ್ ಗೇಮ್ಸ್ಗಾಗಿ ತೆರಳಲಿದೆ
ಭಾರತೀಯ ಹಿರಿಯ ಕ್ರಿಕೆಟ್ ತಂಡದ ನಿಯಮಿತ ಮುಖ್ಯ ಕೋಚ್ ಆಗಿರುವ ಗೌತಮ್ ಗಂಭೀರ್ ಅವರು ಇದೇ ಅವಧಿಯಲ್ಲಿ ತಾಯ್ನಾಡಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಸರಣಿಯಲ್ಲಿ ನಿರತರಾಗಿರಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್ಸಿಎ) ಮುಖ್ಯಸ್ಥರಾಗಿರುವ ವಿ.ವಿ.ಎಸ್. ಲಕ್ಷ್ಮಣ್ ಅವರನ್ನು ಏಷ್ಯನ್ ಗೇಮ್ಸ್ನಲ್ಲಿ ಮುಖ್ಯ ಕೋಚ್ ಆಗಿ ನೇಮಿಸಿದೆ.
ವಿ.ವಿ.ಎಸ್. ಲಕ್ಷ್ಮಣ್ ಅವರೊಂದಿಗೆ ಮಾಜಿ ಕ್ರಿಕೆಟಿಗರುಗಳಾದ ಹೃಷಿಕೇಶ್ ಕಾನಿಟ್ಕರ್ (ಬ್ಯಾಟಿಂಗ್ ಕೋಚ್) ಹಾಗೂ ಸುನಿಲ್ ಜೋಶಿ (ಬೌಲಿಂಗ್ ಕೋಚ್) ಅವರನ್ನು ಸಹಾಯಕ ಸಿಬ್ಬಂದಿಯಾಗಿ ನೇಮಕ ಮಾಡಲಾಗಿದೆ ಎನ್ನಲಾಗಿದೆ.