ಇಸ್ಲಾಮಾಬಾದ್, ಸೆ. 01 (DaijiworldNews/AA): ನಿಮ್ಮ ಅಭಿಮಾನಿಗಳ ಬಳಗ ಹಾಗೂ ಸೋಶಿಯಲ್ ಮೀಡಿಯಾ ಮುಂದೆ ಮಾತ್ರ ನೀವು ಗ್ರೇಟ್, ಮೈದಾನದಲ್ಲಿ ಅಲ್ಲ ಎಂದು ನಾಯಕ ಬಾಬರ್ ವಿರುದ್ಧ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಾಸಿತ್ ಅಲಿ ವಾಗ್ದಾಳಿ ನಡೆಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಾಸಿತ್ ಅಲಿ, "ಬಾಬರ್ ಆಝಂ ಅವರ 'ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್' ಎಂಬ ಇಮೇಜ್ ಕೇವಲ ಸಾಮಾಜಿಕ ಜಾಲತಾಣಗಳಿಗೆ ಸೀಮಿತ. ಕಷ್ಟದ ಸಮಯದಲ್ಲಿ ತಂಡಕ್ಕೆ ನೆರವಾಗದಿದ್ದರೆ ನೀವು ಎಂತಹ ಶ್ರೇಷ್ಠ ಆಟಗಾರ? ನಿಮ್ಮ ಅಭಿಮಾನಿಗಳ ಬಳಗ ಹಾಗೂ ಸೋಶಿಯಲ್ ಮೀಡಿಯಾ ಮುಂದೆ ಮಾತ್ರ ನೀವು ಗ್ರೇಟ್, ಮೈದಾನದಲ್ಲಿ ಅಲ್ಲ" ಎಂದು ಕಿಡಿಕಾರಿದ್ದಾರೆ.
"ಇಂತಹ ಹೀಯಾಳಿಕೆಗೆ ಮುಖ್ಯ ಕಾರಣ, ಬಾಬರ್ ಆಝಂ ಅವರ ವೈಯಕ್ತಿಕ ಪಿಆರ್ ತಂಡ ಮತ್ತು ಅವರ ಆನ್ಲೈನ್ ಅಭಿಮಾನಿಗಳು ಮೈದಾನದ ಪ್ರದರ್ಶನಕ್ಕಿಂತ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಅವರ ಇಮೇಜ್ ಅನ್ನು ದೊಡ್ಡದಾಗಿ ಬಿಂಬಿಸುತ್ತಿರುವುದು. ಆದರೆ ಮೈದಾನದಲ್ಲಿ ಮಾತ್ರ ಅದಕ್ಕೆ ತಕ್ಕ ಪ್ರದರ್ಶನ ಬರುತ್ತಿಲ್ಲ" ಎಂದಿದ್ದಾರೆ.
ಬಾಬರ್ ಆಝಂ ಟೆಸ್ಟ್ ಕ್ರಿಕೆಟ್ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಒಂದೂ ಶತಕ ಗಳಿಸಿಲ್ಲ. ಬಾಬರ್ ತಮ್ಮ ಕೊನೆಯ ಟೆಸ್ಟ್ ಶತಕವನ್ನು ಡಿಸೆಂಬರ್ 2022ರಲ್ಲಿ ನ್ಯೂಝಿಲೆಂಡ್ ವಿರುದ್ಧ ಬಾರಿಸಿದ್ದರು. ಇದಾದ ಬಳಿಕ ಅವರ ಬ್ಯಾಟ್ನಿಂದ ಮೂರಂಕಿ ಮೊತ್ತ ದಾಖಲಾಗಿಲ್ಲ. ಇಂತಹ ಬ್ಯಾಟರ್ನನ್ನು ಸೋಷಿಯಲ್ ಮೀಡಿಯಾದಲ್ಲಿ ಹೊಗಳಲಾಗುತ್ತಿದೆ" ಎಂದು ಟೀಕಿಸಿದ್ದಾರೆ.
"ಇಡೀ ತಂಡದ ಬ್ಯಾಟಿಂಗ್ ಲೈನ್-ಅಪ್ ಬಾಬರ್ ಮೇಲೆಯೇ ಅವಲಂಬಿತವಾಗಿದೆ. ಆದರೆ, ಅವರು ಟೆಸ್ಟ್ನಲ್ಲಿ ಶತಕ ಬಾರಿಸಿ ವರ್ಷಗಳೇ ಕಳೆದಿವೆ. ಅದರಲ್ಲೂ ಲಾರ್ಡ್ಸ್ ಟೆಸ್ಟ್ನಲ್ಲಿ ಜೋಫ್ರಾ ಆರ್ಚರ್ ಎಸೆದ ಶಾರ್ಟ್ ಬಾಲ್ಗೆ ಅತ್ಯಂತ ಸುಲಭವಾಗಿ ವಿಕೆಟ್ ಒಪ್ಪಿಸಿದ ರೀತಿಗೆ ನನಗೆ ದೊಡ್ಡ ಅಚ್ಚರಿಯಾಗಿದೆ" ಎಂದು ಹೇಳಿದ್ದಾರೆ.
"ಬಾಬರ್ ಆಝಂ ಮತ್ತು ಶಾಹೀನ್ ಅಫ್ರಿದಿ ನಡುವಿನ ನಾಯಕತ್ವದ ಭಿನ್ನಾಭಿಪ್ರಾಯವೇ ಪಾಕಿಸ್ತಾನ್ ಕ್ರಿಕೆಟ್ನ ಇಂದಿನ ದುಸ್ಥಿತಿಗೆ ಪ್ರಮುಖ ಕಾರಣ. ಈ ನಾಯಕತ್ವದ ಕಚ್ಚಾಟದಿಂದಾಗಿ ಪಾಕಿಸ್ತಾನ್ ತಂಡದಲ್ಲಿ ಆಟಗಾರರು ಬಾಬರ್ ಬಣ ಮತ್ತು ಶಾಹೀನ್ ಬಣ ಎಂದು ವಿಭಜನೆಗೊಂಡರು. ಇದರಿಂದ ಆಟಗಾರರಲ್ಲಿ ಒಗ್ಗಟ್ಟು ಇಲ್ಲದಂತಾಗಿ, ಮೈದಾನದಲ್ಲಿ ಒಟ್ಟಾಗಿ ಹೋರಾಡುವ ಮನೋಭಾವ ಮಾಯವಾಯಿತು" ಎಂದು ತಿಳಿಸಿದ್ದಾರೆ.