ಕೊಲಂಬೊ, ಜು. 18 (DaijiworldNews/AA): ಲಂಕಾ ಪ್ರೀಮಿಯರ್ ಲೀಗ್ ಸಮಯದಲ್ಲಿ ಆಟಗಾರನಿಗೆ ಲಂಚ ನೀಡಲು ಯತ್ನಿಸಿದ ಆರೋಪದ ಮೇಲೆ ಭಾರತದ ಮಾಜಿ ಅಂಡರ್-19 ವಿಶ್ವಕಪ್ ವಿಜೇತ ಮಂಜೋತ್ ಕಲ್ರಾ ಅವರನ್ನು ಶ್ರೀಲಂಕಾದ ಕ್ರೀಡಾ ಭ್ರಷ್ಟಾಚಾರ ವಿರೋಧಿ ತನಿಖಾಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

ಕೊಲಂಬೋದ ಪಂಚತಾರಾ ಹೋಟೆಲ್ ಒಂದರಲ್ಲಿ ತಂಗಿದ್ದ ಮಂಜೋತ್ ಕಲ್ರಾ ಅವರನ್ನು ಕ್ರೀಡಾ ಅಪರಾಧ ತಡೆ ವಿಶೇಷ ತನಿಖಾ ಘಟಕದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಂದ್ಯದ ಫಲಿತಾಂಶ ಬದಲಾಯಿಸಲು ಆಟಗಾರನಿಗೆ ನೀಡಲು ಇಟ್ಟುಕೊಂಡಿದ್ದ ಸುಮಾರು 9.5 ಮಿಲಿಯನ್ ಶ್ರೀಲಂಕಾ ರೂಪಾಯಿ (ಅಂದಾಜು 24 ಲಕ್ಷ ಭಾರತೀಯ ರೂಪಾಯಿ) ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ನಂತರ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.
ಲಂಕಾ ಪ್ರೀಮಿಯರ್ ಲೀಗ್ಗೆ ಸಂಬಂಧಿಸಿದಂತೆ ಆಟಗಾರನೊಬ್ಬನಿಗೆ ಕಲ್ರಾ ಹಣದ ಆಮಿಷ ಒಡ್ಡಿದ್ದಾರೆ. ಹೀಗಾಗಿ ಮ್ಯಾಚ್ ಫಿಕ್ಸಿಂಗ್ ಯತ್ನಿಸಿದ ಗಂಭೀರ ಆರೋಪ ಮೇಲೆ ಕಲ್ರಾ ಅವರನ್ನು ಬಂಧಿಸಲಾಗಿದೆ. ಅವರನ್ನು ಪಂದ್ಯಾವಳಿ ಆರಂಭವಾಗುವ ಕೆಲವೇ ಗಂಟೆಗಳ ಮೊದಲು ಬಂಧಿಸಲಾಗಿದೆ ಎಂದು ಶ್ರೀಲಂಕಾ ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಕ್ರೀಡಾ ಉದ್ಯಮಿಯಾಗಿ ಬದಲಾಗಿದ್ದ ಕಲ್ರಾ, ಎಲ್ಪಿಎಲ್ನ 'ಜಾಫ್ನಾ ಕಿಂಗ್ಸ್' ಫ್ರಾಂಚೈಸಿಯ ಸಹ-ಮಾಲೀಕರಾಗಿದ್ದರು. ಇದೀಗ ಮಾಲೀಕನಾಗಿಯೇ ಪಂದ್ಯದ ಫಲಿತಾಂಶ ಬದಲಾಯಿಸಲು ಸ್ವಂತ ತಂಡದ ಆಟಗಾರರಿಗೇ ಲಕ್ಷಾಂತರ ರೂಪಾಯಿ ಲಂಚ ನೀಡಲು ಯತ್ನಿಸಿರುವುದಾಗಿ ಆರೋಪಿಸಲಾಗಿದೆ. ಕಲ್ರಾ ಜೊತೆಗೆ ಯುವರಾಜ್ ಪುಷ್ಪಾ ಎಂಬ ಮತ್ತೊಬ್ಬ ಭಾರತೀಯ ಪ್ರಜೆಯನ್ನೂ ಅಧಿಕಾರಿಗಳು ಬಂಧಿಸಿದ್ದಾರೆ.
ಪೃಥ್ವಿ ಶಾ ನೇತೃತ್ವದ ಭಾರತದ 2018 ರ ಅಂಡರ್-19 ವಿಶ್ವಕಪ್ ಪ್ರಶಸ್ತಿ ವಿಜೇತ ತಂಡದ ಭಾಗವಾಗಿದ್ದರು. ಕಲ್ರಾ ಅವರು 101 ರನ್ ಗಳಿಸಿ ಅಜೇಯರಾಗಿ ಉಳಿದು ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶ ನೀಡಿದ್ದರು. ಭಾರತ ತಂಡವು ಆಸ್ಟ್ರೇಲಿಯಾವನ್ನು ಸೋಲಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.