ಅಹಮದಾಬಾದ್, ಮೇ. 31 (DaijiworldNews/AA): ಐಪಿಎಲ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳ ಪೈಕಿ ಚಾಂಪಿಯನ್ ಪಟ್ಟ ಯಾರ ಮುಡಿಗೇರಲಿದೆ ಎಂದು ಕಾದುನೋಡಬೇಕಿದೆ.

ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಸಂಜೆ 7.30 ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಒಂದು ವೇಳೆ ಮಳೆ ಬಂದು ಪಂದ್ಯಕ್ಕೆ ಅಡಚಣೆ ಉಂಟಾದರೆ ಹೆಚ್ಚುವರಿ 2 ಗಂಟೆಗಳನ್ನು ಮೀಸಲು ಸಮಯವಾಗಿ ನಿಗದಿಪಡಿಸಿ ಪಂದ್ಯ ಮುಗಿಸಲು ನಿರ್ಧರಿಸಲಾಗುತ್ತದೆ. ಭಾರೀ ಮಳೆಯಾಗಿ ಪಂದ್ಯವೇ ರದ್ದಾದರೆ ಸೋಮವಾರಕ್ಕೆ ಪಂದ್ಯವನ್ನು ಮುಂದೂಡಲಾಗುತ್ತದೆ.
ಕ್ವಾಲಿಫೈಯರ್ 1ರಲ್ಲಿ ಆರ್ಸಿಬಿ ವಿರುದ್ಧ ಸೋತರೂ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ಮಣಿಸಿ ಗುಜರಾತ್ ಟೈಟಾನ್ಸ್ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಇದೇ ಮೈದಾನದಲ್ಲಿ ಆರ್ಸಿಬಿ ವಿರುದ್ಧ ಲೀಗ್ನಲ್ಲಿ ಗುಜರಾತ್ 4 ವಿಕೆಟ್ಗಳ ಜಯ ಸಾಧಿಸಿತ್ತು. ಹೀಗಾಗಿ ಗುಜರಾತ್ ಆರ್ಸಿಬಿ ವಿರುದ್ಧ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.
ಈವರೆಗೆ ಗುಜರಾತ್ ಹಾಗೂ ಆರ್ಸಿಬಿ ಒಟ್ಟು 9 ಬಾರಿ ಮುಖಾಮುಖಿಯಾಗಿದ್ದು, 5 ಬಾರಿ ಆರ್ಸಿಬಿ ಮತ್ತು 4 ಬಾರಿ ಗುಜರಾತ್ ಟೈಟಾನ್ಸ್ ಗೆಲುವು ಸಾಧಿಸಿವೆ. ಇನ್ನು ಉಭಯ ತಂಡಗಳು ತಲಾ ಒಂದು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಉಭಯ ತಂಡಗಳು ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಡಲಿವೆ.