ಬೆಂಗಳೂರು, ಮೇ. 20 (DaijiworldNews/AA): ನಾನು 'ಇಂಪೋಸ್ಟರ್ ಸಿಂಡ್ರೋಮ್' ನಿಂದ ಬಳಲಿದ್ದೆ. ಆ ಸಮಯದಲ್ಲಿ ಮಾಜಿ ತರಬೇತುದಾರ ರಾಹುಲ್ ದ್ರಾವಿಡ್ ಮತ್ತು ವಿಕ್ರಮ್ ರಾಥೋಡ್ ತಮ್ಮ ಬೆಂಬಲಕ್ಕೆ ನಿಂತರು ಎಂದು ಟೀಂ ಇಂಡಿಯಾದ ಮಾಜಿ ನಾಯಕ, ಆರ್ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕ್ರೀಡಾ ಸಂವಾದವೊಂದರಲ್ಲಿ ಮಾತನಾಡಿದ ಅವರು, "ಕಪ್ತಾನ ಸ್ಥಾನದಿಂದ ಕೆಳಗಿಳಿದ ನಂತರದ ದಿನಗಳಲ್ಲಿ ನಾನು 'ಇಂಪೋಸ್ಟರ್ ಸಿಂಡ್ರೋಮ್' ನಿಂದ ಬಳಲಿದ್ದೆ. ತಾವು ನೆಟ್ಸ್ನಲ್ಲಿ ಬ್ಯಾಟಿಂಗ್ ಮಾಡುವಾಗ ಕಿರಿಯ ಆಟಗಾರರು ನೋಡುತ್ತಿದ್ದರೆ, ಒಂದು ವೇಳೆ ನಾನು ಸರಿಯಾಗಿ ಆಡದಿದ್ದರೆ, ಇವನೇನಾ 20 ವರ್ಷ ಆಡಿರೋದು ಎಂದು ಅವರು ಯೋಚಿಸಬಹುದು ಎಂಬ ಆತಂಕ ಇಂದಿಗೂ ಸಣ್ಣದಾಗಿ ಮೂಡುತ್ತದೆ" ಎಂದು ಹೇಳಿದ್ದಾರೆ.
"ಆ ಕಠಿಣ ಸಮಯದಲ್ಲಿ ಅಂದಿನ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ನನ್ನನ್ನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡರು. ರಾಹುಲ್ ಭಾಯ್ ತಮ್ಮ ವೃತ್ತಿಜೀವನದಲ್ಲೂ ಇಂತಹ ಹಂತವನ್ನು ನೋಡಿದ್ದರಿಂದ ಅವರಿಗೆ ನನ್ನ ಮನಸ್ಥಿತಿ ಚೆನ್ನಾಗಿ ಅರ್ಥವಾಯಿತು. ಅವರಿಬ್ಬರೂ ನನ್ನನ್ನು ಮಾನಸಿಕವಾಗಿ ತುಂಬಾ ಚೆನ್ನಾಗಿ ನೋಡಿಕೊಂಡಿದ್ದರಿಂದಲೇ ನಾನು ಮತ್ತೆ ಕ್ರಿಕೆಟ್ ಅನ್ನು ಮುಕ್ತವಾಗಿ ಆನಂದಿಸಲು ಸಾಧ್ಯವಾಯಿತು" ಎಂದಿದ್ದಾರೆ.
"ನಾನು ಮಾನಸಿಕವಾಗಿ ಕುಗ್ಗಿದ್ದೇನೆ ಎಂದು ಒಪ್ಪಿಕೊಳ್ಳಲು ನನಗೇನೂ ಸಂಕೋಚವಿಲ್ಲ. ನಾವು ಮಾನಸಿಕವಾಗಿ ದುರ್ಬಲರು ಎಂದು ಇತರರು ಭಾವಿಸಬಾರದು ಎಂಬ ಕಾರಣಕ್ಕೆ ನಮ್ಮ ಭಾವನೆಗಳನ್ನು ಮುಚ್ಚಿಡುತ್ತೇವೆ. ಆದರೆ ನೆನಪಿಡಿ, ನಾವೇನೋ ಗಟ್ಟಿಯಾಗಿದ್ದೇವೆ ಎಂದು ಸುಳ್ಳು ಪ್ರದರ್ಶನ ನೀಡುವುದು ನಾವು ದುರ್ಬಲರಾಗಿದ್ದೇವೆ ಎಂದು ಒಪ್ಪಿಕೊಳ್ಳುವುದಕ್ಕಿಂತಲೂ ತುಂಬಾ ಅಪಾಯಕಾರಿ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.