ಬೆಂಗಳೂರು, ಮೇ. 17 (DaijiworldNews/TA) : ಐಪಿಎಲ್ 2026ರ ಪ್ಲೇಆಫ್ ರೇಸ್ ದಿನದಿಂದ ದಿನಕ್ಕೆ ರೋಚಕ ಘಟ್ಟ ತಲುಪುತ್ತಿದ್ದು, ಇಂದು ನಡೆಯಲಿರುವ 61ನೇ ಪಂದ್ಯವು ಎರಡು ತಂಡಗಳ ಭವಿಷ್ಯವನ್ನು ನಿರ್ಧರಿಸಲಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ.

ಈ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ 18 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶ ಖಚಿತವಾಗಲಿದೆ. ಮತ್ತೊಂದೆಡೆ, ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಪಂಜಾಬ್ ಕಿಂಗ್ಸ್ಗೆ ಗೆಲುವು ಅನಿವಾರ್ಯವಾಗಿದೆ. ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಆರ್ಸಿಬಿಗೆ ನೇರ ಎಚ್ಚರಿಕೆ ರವಾನಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಸೋಲಿನ ಬಳಿಕ ಮಾತನಾಡಿದ ಅವರು, “ನಾವು ಆರ್ಸಿಬಿ ವಿರುದ್ಧ ಆಡಲು ಕಾತರರಾಗಿದ್ದೇವೆ. ತಂಡ ಸಂಪೂರ್ಣ ಸಿದ್ಧವಾಗಿದೆ. ಈ ಪಂದ್ಯದಲ್ಲಿ ಗೆಲ್ಲಲೇಬೇಕು, ಗೆಲ್ಲುತ್ತೇವೆ,” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಪಂದ್ಯದಲ್ಲಿ ಅಝ್ಮತುಲ್ಲಾ ಒಮರ್ಜಾಯ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ 200ಕ್ಕೂ ಹೆಚ್ಚು ರನ್ ಕಲೆಹಾಕಿದ್ದರೂ, ಬೌಲಿಂಗ್ ವೈಫಲ್ಯದಿಂದ ಮುಂಬೈ ಇಂಡಿಯನ್ಸ್ ಎದುರು ಸೋಲನುಭವಿಸಬೇಕಾಯಿತು. ಸತತ ಐದು ಸೋಲುಗಳಿಂದ ತಂಡ ಒತ್ತಡದಲ್ಲಿದ್ದರೂ, ಇದೇ ಒತ್ತಡ ತಂಡದ ಶ್ರೇಷ್ಠ ಪ್ರದರ್ಶನಕ್ಕೆ ಕಾರಣವಾಗಲಿದೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಪ್ರಸ್ತುತ ಪಂಜಾಬ್ ಕಿಂಗ್ಸ್ 12 ಪಂದ್ಯಗಳಿಂದ 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಸತತ ಸೋಲುಗಳಿಂದ ತಂಡದ ಆತ್ಮವಿಶ್ವಾಸಕ್ಕೆ ಧಕ್ಕೆಯಾಗಿದೆ. ಈಗ ಪ್ಲೇಆಫ್ ಪ್ರವೇಶಿಸಲು ಉಳಿದಿರುವ ಆರ್ಸಿಬಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ಗೆಲ್ಲುವುದು ಪಂಜಾಬ್ಗೆ ಅನಿವಾರ್ಯವಾಗಿದೆ.
ಇನ್ನೊಂದೆಡೆ, ರಜತ್ ಪಾಟಿದಾರ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ಪಂದ್ಯಗಳಿಂದ 16 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ಲೇಆಫ್ಗೆ ಅರ್ಹತೆ ಪಡೆಯಲು ಆರ್ಸಿಬಿಗೆ ಇನ್ನೊಂದು ಗೆಲುವು ಸಾಕಾಗಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಉಭಯ ತಂಡಗಳೂ ಗೆಲುವಿಗಾಗಿ ಸಂಪೂರ್ಣ ಶಕ್ತಿಯನ್ನೇ ಹೂಡುವ ನಿರೀಕ್ಷೆ ಇದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಅಭಿಮಾನಿಗಳಿಗೆ ರಸದೌತಣ ನೀಡುವ ಸಾಧ್ಯತೆಯಿದೆ.