ನವದೆಹಲಿ, ಮೇ. 13 (DaijiworldNews/AA): ಯುರೋಪಿಯನ್ ಟಿ೨೦ ಲೀಗ್ನ ಉದ್ಘಾಟನಾ ಆವೃತ್ತಿಯ ತಂಡವೊಂದನ್ನು ಭಾರತ ತಂಡದ ಮಾಜಿ ನಾಯಕ ಹಾಗೂ ತರಬೇತುದಾರ ರಾಹುಲ್ ದ್ರಾವಿಡ್ ಖರೀದಿಸಿದ್ದಾರೆ.

ಅಭಿಷೇಕ್ ಬಚ್ಚನ್ ಸಹ-ಸ್ಥಾಪಕರಾಗಿರುವ ಇಟಿಪಿಎಲ್ ಟೂರ್ನಮೆಂಟ್ನಲ್ಲಿ, ಐರ್ಲೆಂಡ್ ಮೂಲದ 'ಡಬ್ಲಿನ್ ಗಾರ್ಡಿಯನ್ಸ್' ಫ್ರಾಂಚೈಸಿ ತಂಡವನ್ನು ರಾಹುಲ್ ದ್ರಾವಿಡ್ ಅವರು ಖರೀದಿಸಿ ಅಧಿಕೃತ ಮಾಲೀಕರಾದ್ದಾರೆ. ಆಗಸ್ಟ್ 26 ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಡಬ್ಲಿನ್ ಗಾರ್ಡಿಯನ್ಸ್ ತಂಡವನ್ನು ಟೀಮ್ ಇಂಡಿಯಾ ಮಾಜಿ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಮುನ್ನಡೆಸಲಿದ್ದಾರೆ.
ಈ ಹಿಂದೆ ರಾಹುಲ್ ದ್ರಾವಿಡ್ ಹಾಗೂ ಆರ್ ಅಶ್ವಿನ್ ಇಬ್ಬರೂ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಜೊತೆಯಾಗಿದ್ದರು. ಇದೀಗ ರಾಹುಲ್ ದ್ರಾವಿಡ್ ಹಾಗೂ ಆರ್ ಅಶ್ವಿನ್ ಮತ್ತೊಮ್ಮೆ ಒಂದಾಗಿ ಕೆಲಸ ಮಾಡಲಿದ್ದಾರೆ.
ತಂಡ ಖರೀದಿಸಿದ ನಿರ್ಧಾರದ ಕುರಿತು ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್, "ಈ ಟೂರ್ನಿಯತ್ತ ನನ್ನನ್ನು ಆಕರ್ಷಿಸಿದ್ದು, ಅದರ ಹಿಂದಿನ ದೃಷ್ಟಿಕೋನ, ಐರ್ಲೆಂಡ್ ಮತ್ತು ಯುರೋಪಿನಾದ್ಯಂತ ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ಸೃಷ್ಟಿಸುವ ಮೂಲಕ ಯುರೋಪಿನಲ್ಲಿ ಕ್ರಿಕೆಟ್ ಬೆಳೆಯಲು ಸಹಾಯ ಮಾಡುವುದಾಗಿದೆ" ಎಂದು ತಿಳಿಸಿದ್ದಾರೆ.
"ಡಬ್ಲಿನ್ ತಂಡ ಈಗಾಗಲೇ ಉತ್ಸಾಹಭರಿತ ಕ್ರಿಕೆಟ್ ಆಟಗಾರರನ್ನು ಹೊಂದಿದ್ದು, ಅಗಾಧ ಸಾಮರ್ಥ್ಯ ಹೊಂದಿದೆ. ಮುಂದಿನ ಕ್ರಿಕೆಟ್ ಪೀಳಿಗೆಯನ್ನು ಪೋಷಿಸಿವುದು ಮುಖ್ಯ. ಈ ಪ್ರಯತ್ನದಲ್ಲಿ ಇಟಿಪಿಎಲ್ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.