ರಾಯ್ಪುರ್, ಮೇ. 11 (DaijiworldNews/AA): ಐಪಿಎಲ್ನ 54ನೇ ಪಂದ್ಯದ ವೇಳೆ ಅಸಭ್ಯ ಪದಗಳನ್ನು ಬಳಸಿದ ಕಾರಣಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಅವರಿಗೆ ಪಂದ್ಯದ ಶುಲ್ಕದ ಶೇ. 15 ರಷ್ಟು ದಂಡ ವಿಧಿಸಲಾಗಿದೆ.

ರಾಯ್ಪುರ್ನಲ್ಲಿ ನಡೆದ ಆರ್ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯದ ವೇಳೆ ಮೂರನೇ ಅಂಪೈರ್ ನೀಡಿದ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ ಆರ್ಸಿಬಿ ಕೋಚ್ ಆ್ಯಂಡಿ ಫ್ಲವರ್ ಡಗೌಟ್ ಬಳಿ ನಾಲ್ಕನೇ ಅಂಪೈರ್ ಜೊತೆ ತೀವ್ರ ವಾಗ್ವಾದಕ್ಕಿಳಿದಿದ್ದಾರೆ.
ಈ ಪಂದ್ಯದ 17ನೇ 2ನೇ ಎಸೆತವನ್ನು ಕೃನಾಲ್ ಪಾಂಡ್ಯ ಸಿಕ್ಸರ್ನತ್ತ ಬಾರಿಸಿದ್ದರು. ಆದರೆ ಚೆಂಡು ಬೌಂಡರಿ ಲೈನ್ ದಾಟುವ ಮುನ್ನ ನಮನ್ ಧೀರ್ ಹಿಡಿದಿದ್ದರು. ಅಲ್ಲದೆ ಅದನ್ನು ರಿಲೇ ಕ್ಯಾಚ್ಗಾಗಿ ತಿಲಕ್ ವರ್ಮಾರತ್ತ ಎಸೆದಿದ್ದರು. ಆದರೆ ಈ ಕ್ಯಾಚ್ ಅನ್ನು ತಿಲಕ್ ವರ್ಮಾ ಹಿಡಿಯಲು ಸಾಧ್ಯವಾಗಿರಲಿಲ್ಲ.
ಅಷ್ಟೇ ಅಲ್ಲದೆ ನಮನ್ ಧೀರ್ ಅವರ ಕಾಲು ಬೌಂಡರಿ ಲೈನ್ಗೆ ತಾಗಿದೆ ಎಂದು ಕೃನಾಲ್ ಪಾಂಡ್ಯ ಸಿಕ್ಸ್ ಆಗಿದೆ ಎಂದು ರನ್ ಓಡಿರಲಿಲ್ಲ. ಆದರೆ ಮೂರನೇ ಅಂಪೈರ್ ಪರಿಶೀಲನೆ ವೇಳೆ ನಮನ್ ಧೀರ್ ಕಾಲು ಬೌಂಡರಿ ಗೆರೆಗೆ ತಾಗಿಲ್ಲವೆಂದು ತೀರ್ಪು ನೀಡಿದ್ದಾರೆ. ಹೀಗಾಗಿ ಮೂರನೇ ಅಂಪೈರ್ ಸಿಕ್ಸ್ ನೀಡಿರಲಿಲ್ಲ. ಇತ್ತ ಕೃನಾಲ್ ಪಾಂಡ್ಯ ರನ್ ಓಡದ ಕಾರಣ ಡಾಟ್ ಬಾಲ್ ಆಯಿತು.
ಆದರೆ ಮೂರನೇ ಅಂಪೈರ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ ಆರ್ಸಿಬಿ ಕೋಚ್ ಆ್ಯಂಡಿ ಫ್ಲವರ್ ಡಗೌಟ್ ಬಳಿ ನಾಲ್ಕನೇ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಅವರು ಕೆಲವು ಅಸಭ್ಯ ಪದಗಳನ್ನು ಬಳಸಿದ್ದು, ಅದು ಮೈದಾನದ ಮೈಕ್ರೋಫೋನ್ನಲ್ಲಿ ಸೆರೆಯಾಗಿದೆ.
ಇನ್ನು ಈ ರೀತಿ ಪಂದ್ಯದ ವೇಳೆ ಅಸಭ್ಯ ಪದ ಬಳಸುವುದು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.3 ರ (ಪಂದ್ಯದ ಅವಧಿಯಲ್ಲಿ ಅಸಭ್ಯ ಭಾಷೆಯ ಬಳಕೆ) ಅಡಿಯಲ್ಲಿ 'ಲೆವೆಲ್ 1' ಅಪರಾಧವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಆ್ಯಂಡಿ ಫ್ಲವರ್ ಅವರಿಗೆ ಪಂದ್ಯದ ಶುಲ್ಕದ ಶೇ. 15 ರಷ್ಟು ದಂಡವನ್ನು ಮ್ಯಾಚ್ ರೆಫರಿ ಅಮಿತ್ ಶರ್ಮಾ ಅವರು ವಿಧಿಸಿದ್ದಾರೆ.