ಮುಂಬೈ, ಮೇ. 09 (DaijiworldNews/AA): ರೋಹಿತ್ ಶರ್ಮಾ ಧರಿಸಿದ್ದ 3.25 ಕೋಟಿ ರೂ. ಮೌಲ್ಯದ ವಾಚ್ ಯುವ ಅಭಿಮಾನಿಗಳು ಕದಿಯಲು ಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಖಾಸಗಿ ಕಾರ್ಯಕ್ರಮವೊಂದಕ್ಕೆ ಕ್ರಿಕೆಟಿಗ ರೋಹಿತ್ ಶರ್ಮಾ ಆಗಮಿಸಿದ್ದರು. ಈ ವೇಳೆ ಕಾರಿನಲ್ಲಿ ಆಗಮಿಸಿದ ರೋಹಿತ್ ಶರ್ಮಾ, ಹೊರಗಿದ್ದ ಪುಟಾಣಿ ಅಭಿಮಾನಿಗಳನ್ನು ಕಂಡು ಕಿಟಕಿ ಕೆಳಗಿಳಿಸಿ, ಕೈ ಬೀಸಿದ್ದಾರೆ. ಆದರೆ ಈ ಪುಟಾಣಿ ಅಭಿಮಾನಿಗಳು ರೋಹಿತ್ ಶರ್ಮಾ ಕೈ ಹಿಡಿದು ಎಳೆದು ವಾಚ್ ಕಳವು ಮಾಡುವ ಪ್ರಯತ್ನ ನಡೆದಿದೆ. ಈ ವೇಳೆ ರೋಹಿತ್ ಕೈ ಒಳಗೆ ಎಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ದೃಶ್ಯದಲ್ಲಿ ರೋಹಿತ್ ಶರ್ಮಾ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದಾರೆ. ಅಭಿಮಾನಿಗಳು ಫೋಟೋ ತೆಗೆಯಲು, ಶುಭಕೋರಲು ಕಾದು ಕುಳಿತಿದ್ದರು. ಕಾರು ನಿಧಾನವಾಗಿ ಚಲಿಸುತ್ತಿತ್ತು. ಈ ವೇಳೆ ರೋಹಿತ್ ಶರ್ಮಾ ಕಾರಿನ ಹಿಂಬದಿಯ ವಿಂಡೋ ತೆರೆದು ಕೈ ಹೊರಗೆ ಹಾಕಿದ್ದಾರೆ. ಬಳಿಕ ಕಾರಿನ ಪಕ್ಕಕ್ಕೆ ಆಗಮಿಸಿದ ಅಭಿಮಾನಿಗಳಿಗೆ ಕೈಕುಲುಕಲು ಮುಂದಾಗಿದ್ದಾರೆ. ಆರಂಭದಲ್ಲಿ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ ಓರ್ವ ಪುಟಾಣಿ ಅಭಿಮಾನಿ ನೇರವಾಗಿ ರೋಹಿತ್ ಶರ್ಮಾ ಕೈಗೆ ಕಟ್ಟಿದ ವಾಚ್ ಬಳಿ ಹಿಡಿದು ಎಳೆಯುವ ಪ್ರಯತ್ನ ಮಾಡಿದ್ದಾನೆ. ರೋಹಿತ್ ಶರ್ಮಾ ಕೈಗಳನ್ನು ತಳ್ಳಿದರೂ ಅಭಿಮಾನಿ ಮಾತ್ರ ತನ್ನ ಎರಡು ಕೈಗಳಿಂದ ರೋಹಿತ್ ಶರ್ಮಾ ಕೈಯಲ್ಲಿದ್ದ ವಾಚ್ ಎಳೆಯುವ ಪ್ರಯತ್ನ ಮಾಡಿದ್ದಾನೆ.
ರೋಹಿತ್ ಶರ್ಮಾ ಧರಿಸಿದ್ದ ಈ ವಾಚ್ ರೋಲೆಕ್ಸ್ ಜಿರಾಫೆ ಬ್ರ್ಯಾಂಡ್ನದ್ದು. ಈ ವಾಚ್ 3.25 ಕೋಟಿ ರೂ. ಬೆಲೆಬಾಳುತ್ತದೆ ಎನ್ನಲಾಗಿದೆ.