ಮುಂಬೈ, ಮೇ. 09 (DaijiworldNews/AA): ಉದ್ದೀಪನ ಮದ್ದು ಸೇವನೆ ತಡೆ ಘಟಕದ ಅಧಿಕಾರಿಗಳು ನಡೆಸುವ ಡೋಪಿಂಗ್ ಪರೀಕ್ಷೆಗೆ ಭಾರತೀಯ ಕ್ರಿಕೆಟ್ ತಾರೆಗಳಾದ ಯಶಸ್ವಿ ಜೈಸ್ವಾಲ್ ಮತ್ತು ಶಫಾಲಿ ವರ್ಮಾ ಅವರು ಗೈರಾಗಿರುವ ಕಾರಣ, ಈ ಇಬ್ಬರಿಗೆ ನಾಡಾ ನೋಟಿಸ್ ಜಾರಿ ಮಾಡಿದೆ.

ರಾಷ್ಟ್ರೀಯ ಉದ್ದೀಪನ ಮದ್ದು ವಿರೋಧಿ ಸಂಸ್ಥೆಯ ನಿಯಮದಂತೆ, ನೋಂದಾಯಿತ ಪರೀಕ್ಷಾ ಪೂಲ್ನಲ್ಲಿರುವ ಕ್ರೀಡಾಪಟುಗಳು ತಾವು ಇರುವ ಸ್ಥಳದ ಮಾಹಿತಿಯನ್ನು ಮೊದಲೇ ನೀಡಬೇಕಾಗುತ್ತದೆ. ಆದರೆ, ನಿಗದಿಪಡಿಸಿದ ಸಮಯದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಶಫಾಲಿ ವರ್ಮಾ ತಮ್ಮ ಸ್ಥಳಗಳಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.
2025 ರ ನವೆಂಬರ್ 7 ರಂದು ಶಫಾಲಿ ವರ್ಮಾ ಪರೀಕ್ಷೆಗೆ ಲಭ್ಯರಿರಲಿಲ್ಲ. ಹಾಗೂ ಯಶಸ್ವಿ ಜೈಸ್ವಾಲ್ 2025 ರ ಡಿಸೆಂಬರ್ 17 ರಂದು ಅಧಿಕಾರಿಗಳು ಭೇಟಿ ನೀಡಿದಾಗ ಸ್ಥಳದಲ್ಲಿ ಇರಲಿಲ್ಲ ಎಂದು ವರದಿಯಾಗಿದೆ.
ಈ ಬೆಳವಣಿಗೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಗಂಭೀರವಾಗಿ ಪರಿಗಣಿಸಿದ್ದು, ಆಟಗಾರರಿಂದ ವಿವರಣೆ ಕೇಳಲು ಮುಂದಾಗಿದೆ. ತಾಂತ್ರಿಕ ಕಾರಣಗಳಿಂದ ಅಥವಾ ಮಾಹಿತಿ ನೀಡುವಲ್ಲಿನ ವಿಳಂಬದಿಂದ ಹೀಗಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಮಂಡಳಿ ತಿಳಿಸಿದೆ.