ಜೈಪುರ್, ಏ. 30 (DaijiworldNews/AA): ಕೇವಲ 15 ವರ್ಷ ವಯಸ್ಸಿನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸ್ಫೋಟಕ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರ ಬ್ಯಾಟ್ನಲ್ಲಿ ಎಐ ಚಿಪ್ ಇದೆ ಎಂದು ಪಾಕಿಸ್ತಾನದ ವಿಶ್ಲೇಷಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಈ ಆರೋಪಕ್ಕೆ ವೈಭವ್ ಸೂರ್ಯವಂಶಿ ನೀಡಿರುವ ಪ್ರತಿಕ್ರಿಯೆ ಎಲ್ಲೆಡೆ ವೈರಲ್ ಆಗುತ್ತಿದೆ.

ಪಾಕಿಸ್ತಾನದ ಖ್ಯಾತ ಕ್ರೀಡಾ ವಿಶ್ಲೇಷಕ ಡಾ. ನೌಮಾನ್ ನಿಯಾಝ್, ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, "ಈ 15 ವರ್ಷದ ಹುಡುಗ ಹೊಡೆಯುವ ಹೊಡೆತಗಳು ಮನುಷ್ಯನಿಂದ ಸಾಧ್ಯವಿಲ್ಲದಂತಿದೆ. ವೈಭವ್ ಅವರ ಬ್ಯಾಟ್ ಅನ್ನು ವಾಡಾ ಪರೀಕ್ಷೆಗೆ ಒಳಪಡಿಸಿದಂತೆ ಲ್ಯಾಬ್ನಲ್ಲಿ ಪರೀಕ್ಷಿಸಬೇಕು. ಅವರ ಬ್ಯಾಟ್ನಲ್ಲಿ ಯಾವುದೋ ಎಐ ತಂತ್ರಜ್ಞಾನದ ಚಿಪ್ ಇದೆ ಎಂದೆನಿಸುತ್ತಿದೆ" ಎಂದು ಹೇಳಿದ್ದಾರೆ.
"ಬ್ಯಾಟ್ನಲ್ಲಿ ಎಐ ಚಿಪ್ ಇರುವ ಕಾರಣ ವೈಭವ್ ಆ ರೀತಿಯಾಗಿ ಬ್ಯಾಟ್ ಮಾಡುತ್ತಿದ್ದಾನೆ. ಇಲ್ಲದಿದ್ದರೆ ಈ ವಯಸ್ಸಿಗೆ ಅಂತಹ ಆಟ ಆಡಲು ಸಾಧ್ಯವಿಲ್ಲ. ಹೀಗಾಗಿ ಅವರ ಬ್ಯಾಟ್ ಅನ್ನು ಪರೀಕ್ಷೆಗೆ ಒಳಪಡಿಸಬೇಕು" ಎಂದು ಆಗ್ರಹಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಡಾ. ನೌಮಾನ್ ನಿಯಾಝ್ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ವೈಭವ್ ಸೂರ್ಯವಂಶಿ, "ನನ್ನ ಬ್ಯಾಟ್ನಲ್ಲಿ ಚಿಪ್ ಏನಾದರೂ ಇದ್ದರೆ ಅದನ್ನು ದೇವರೆ ಅಳವಡಿಸಿ ಕಳುಹಿಸಿದ್ದಾರೆ. ದೇವರು ಮೇಲಿಂದಲೇ ಹೇಳಿದ್ದ, ನಿನ್ನ ಬ್ಯಾಟ್ನಲ್ಲಿ ಒಂದು ವಿಶೇಷ ಶಕ್ತಿ ನೀಡುತ್ತಿದ್ದೇನೆ ಎಂದು. ನಾನು ಕೇವಲ ಅದನ್ನು ಬಳಸುತ್ತಿದ್ದೇನೆ ಅಷ್ಟೇ" ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ. ಇನ್ನು ವೈಭವ್ ಸೂರ್ಯವಂಶಿ ಅವರ ಉತ್ತರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.