ಬೆಂಗಳೂರು, ಮಾ. 26 (DaijiworldNews/AA): ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್ಎಲ್) ಕಂಪನಿಯು ತನ್ನ ಹಿಡಿತದಲ್ಲಿ ಇದ್ದ ಆರ್ಸಿಬಿ ಒಡೆತನವನ್ನು ಸಂಪೂರ್ಣವಾಗಿ ಮಾರಾಟ ಮಾಡಿದೆ. ಆರ್ಸಿಬಿ ತಂಡ ಮಾರಾಟ ಆಗಿದ್ದಕ್ಕೆ ಟ್ವೀಟ್ ಮಾಡಿರುವ ವಿಜಯ್ ಮಲ್ಯ ಅವರು, 'ಆರ್ಸಿಬಿ ಯಾವಾಗಲೂ ನನ್ನ ಡಿಎನ್ಎಯ ಭಾಗವಾಗಿ ಉಳಿಯುತ್ತದೆ' ಎಂದಿದ್ದಾರೆ.

'ಆರ್ಸಿಬಿಯ ಹೊಸ ಮಾಲೀಕರಿಗೆ ನನ್ನ ಹೃತ್ಪೂರ್ವಕವಾಗಿ ಅಭಿನಂದನೆಗಳು. ಐಪಿಎಲ್ನಲ್ಲಿ ಅತ್ಯಂತ ಅಮೂಲ್ಯವಾದ ಫ್ರಾಂಚೈಸಿಯನ್ನು ಖರೀದಿಸಿದ ನಿಮಗೆ ಶುಭ ಹಾರೈಸುತ್ತೇನೆ. ನಾನು ೨೦೦೮ರಲ್ಲಿ ಫ್ರಾಂಚೈಸಿಯನ್ನು 450 ಕೋಟಿ ರೂಪಾಯಿಗೆ ಖರೀದಿಸಿದೆ. ಆಗ ಬಹುತೇಕರು ನನ್ನನ್ನು ನೋಡಿ ನಕ್ಕರು. ನನ್ನ ಹೂಡಿಕೆ ವ್ಯರ್ಥ ಎಂದು ಟೀಕಿಸಿದರು' ಎಂದು ತಿಳಿಸಿದ್ದಾರೆ.
'ರಾಯಲ್ ಚಾಲೆಂಜ್ ಬ್ರ್ಯಾಂಡ್ ಅನ್ನು ನಿರ್ಮಿಸಬೇಕು ಎಂದು ನನಗೆ ಬಹುವಾಗಿ ಇತ್ತು. ಈ ಕಾರಣದಿಂದ ನಾನು ತಂಡಕ್ಕೆ ಆರ್ಸಿಬಿ ಎಂದು ಹೆಸರಿಸಿದೆ. ನನ್ನ 450 ಕೋಟಿ ರೂಪಾಯಿ ಹೂಡಿಕೆ ಈಗ 16,500 ಕೋಟಿ ರೂಪಾಯಿಗಳಿಗೆ ಬೆಳೆದಿರುವುದನ್ನು ನೋಡಲು ಅಪಾರ ಸಂತೋಷವಾಗಿದೆ. ಆರ್ಸಿಬಿ ಯಾವಾಗಲೂ ನನ್ನ ಡಿಎನ್ಎಯ ಭಾಗವಾಗಿ ಉಳಿಯುತ್ತದೆ' ಎಂದು ಹೇಳಿದ್ದಾರೆ.
ಆರ್ಸಿಬಿ ತಂಡದ ಆಟಗಾರರು ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಎಲ್ಲಾ ಆರ್ಸಿಬಿ ಅಭಿಮಾನಿಗಳಿಗೆ, ಕೃತಜ್ಞತಾಪೂರ್ವಕ ಧನ್ಯವಾದಗಳು. ದಯವಿಟ್ಟು ಬೆಂಗಳೂರಿನ ಸಿಂಹ ಆರ್ಸಿಬಿಯನ್ನು ಬೆಂಬಲಿಸುವುದನ್ನು ಮುಂದುವರಿಸಿ ನಮಸ್ಕಾರ' ಎಂದು ಅವರು ಕೋರಿದ್ದಾರೆ.
ಆದಿತ್ಯ ಬಿರ್ಲಾ ಸಮೂಹ ಸುಮಾರು 16,706 ಕೋಟಿ ರೂಪಾಯಿಗೆ ಆರ್ಸಿಬಿ ಫ್ರ್ಯಾಂಚೈಸಿಯನ್ನು ಖರೀದಿ ಮಾಡಿದೆ. ಆದಿತ್ಯ ಬಿರ್ಲಾ ಜೊತೆ ಅಮೆರಿಕದ ಹೂಡಿಕೆದಾರ ಡೇವಿಡ್ ಬ್ಲಿಟ್ಝರ್ ಒಡೆತನದ ಬೋಲ್ಟ್ ವೆಂಚರ್ಸ್, ಬ್ಲ್ಯಾಕ್ಸ್ಟೋನ್ ಇಕ್ವಿಟಿ ಫರ್ಮ್ ಆರ್ಸಿಬಿಯನ್ನ ಖರೀದಿಸಿದೆ.