ಬೆಂಗಳೂರು, ಮಾ. 24 (DaijiworldNews/TA): IPL 2026 ಮಾರ್ಚ್ 28ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿದೆ. ಸೀಸನ್ ಆರಂಭಕ್ಕೂ ಮೊದಲು BCCI ಕೆಲವು ಪ್ರಮುಖ ನಿಯಮ ಬದಲಾವಣೆಗಳನ್ನು ಜಾರಿಗೆ ತಂದಿದ್ದು, ಇದು ಈ ಬಾರಿ ಟೂರ್ನಿಯ ಮೇಲೆ ಸಾಕಷ್ಟು ಪ್ರಭಾವ ಬೀರುವ ನಿರೀಕ್ಷೆ ಇದೆ.

ಹೊಸ ನಿಯಮಗಳ ಪ್ರಕಾರ, ಪಂದ್ಯ ದಿನಗಳಲ್ಲಿ ತಂಡಗಳು ಪ್ರ್ಯಾಕ್ಟಿಸ್ ಸೆಷನ್ ನಡೆಸಲು ಅನುಮತಿ ಹೊಂದಿರುವುದಿಲ್ಲ. ಪಿಚ್ಗಳನ್ನು ರಕ್ಷಿಸುವುದು ಮತ್ತು ಗುಣಮಟ್ಟವನ್ನು ಕಾಪಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣ ಸೇರಿದಂತೆ ಬಿಸಿಸಿಐ ನಿಯೋಜಿಸಿರುವ ಅಭ್ಯಾಸ ಪ್ರದೇಶಗಳಲ್ಲಿ, ಎರಡು ತಂಡಗಳು ಒಂದೇ ಸಮಯದಲ್ಲಿ ಅಭ್ಯಾಸ ಮಾಡುತ್ತಿದ್ದರೆ, ತಲಾ ಎರಡು ಪಿಚ್ಗಳನ್ನು ಮಾತ್ರ ಬಳಸಬಹುದು. ಎದುರಾಳಿ ತಂಡಕ್ಕೆ ಮೀಸಲಿಟ್ಟ ಜಾಗವನ್ನು ಬಳಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ, ಖಾಲಿಯಿದ್ದರೂ ಸಹ ಅದನ್ನು ಬಳಸಲು ಸಾಧ್ಯವಿಲ್ಲ.
ಪಂದ್ಯದ ದಿನಗಳಲ್ಲಿ ತಂಡಗಳು ಆಟಗಾರರಿಗೆ ಫಿಟ್ನೆಸ್ ಪರೀಕ್ಷೆ ನಡೆಸಲು ಅನುಮತಿ ಹೊಂದಿಲ್ಲ. ಆಟಗಾರರ ಕುಟುಂಬದವರು ಮತ್ತು ಸ್ನೇಹಿತರು ತರಬೇತಿ ಅವಧಿಯಲ್ಲಿ ಮೈದಾನ ಪ್ರವೇಶಕ್ಕೆ ಅವಕಾಶ ನೀಡಲಾಗುವುದಿಲ್ಲ. ಅವರು ನಿಗದಿತ ಸ್ಥಳದಲ್ಲಿ ನಿಂತು ಅಭ್ಯಾಸ ವೀಕ್ಷಣೆ ಮಾಡಬಹುದು. ತಂಡಗಳು ಪಂದ್ಯಕ್ಕೆ ತಂಡದ ಬಸ್ ಮೂಲಕ ಮಾತ್ರ ಪ್ರಯಾಣಿಸಬೇಕು ಮತ್ತು ಆಟಗಾರರು ಡ್ರೆಸ್ ಕೋಡ್ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.
ಈ ಹೊಸ ನಿಯಮಗಳು ತಂಡಗಳಿಗೆ ಸಮಾನಾವಕಾಶವನ್ನು ನೀಡುವುದಷ್ಟಲ್ಲ, ಪಿಚ್ ಸಂರಕ್ಷಣೆ ಹಾಗೂ ಆಟಗಾರರ ಸುರಕ್ಷತೆಯ ಮೇಲೆಯೂ ಹೆಚ್ಚು ಗಮನಹರಿಸುವ ಉದ್ದೇಶವನ್ನು ಹೊಂದಿವೆ.