ಇಸ್ಲಾಮಾಬಾದ್, ಮಾ. 23 (DaijiworldNews/TA): ಪಾಕಿಸ್ತಾನ್ ಸೂಪರ್ ಲೀಗ್ 2026 ಆರಂಭಕ್ಕೆ ಸಿದ್ಧತೆ ನಡೆಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸಮಸ್ಯೆಗಳು ಕಡಿಮೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ವಿದೇಶಿ ಆಟಗಾರರ ಲಭ್ಯತೆ ಸಮಸ್ಯೆಯ ನಡುವೆಯೇ ಇದೀಗ ಭದ್ರತಾ ಸವಾಲುಗಳು ಮತ್ತಷ್ಟು ತೀವ್ರವಾಗಿವೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್ ಸಂಘರ್ಷ ಪರಿಣಾಮವಾಗಿ ಉಂಟಾದ ಇಂಧನ ಕೊರತೆ ಹಿನ್ನೆಲೆ, ಪಂದ್ಯಾವಳಿಯನ್ನು ಕೇವಲ ಎರಡು ಕ್ರೀಡಾಂಗಣಗಳಲ್ಲಿ ಪ್ರೇಕ್ಷಕರಿಲ್ಲದೆ ನಡೆಸಲು ಪಿಸಿಬಿ ತೀರ್ಮಾನಿಸಿದೆ. ಇದರ ನಡುವೆ ಭದ್ರತಾ ಆತಂಕಗಳು ಹೆಚ್ಚಾಗಿವೆ.
ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜಮಾತ್-ಉಲ್-ಅಹ್ರಾರ್ ವಿದೇಶಿ ಆಟಗಾರರಿಗೆ ಗಂಭೀರ ಎಚ್ಚರಿಕೆ ನೀಡಿದೆ. “ಯಾವುದೇ ಕ್ರಿಕೆಟ್ ಮಂಡಳಿಗಳು ತಮ್ಮ ಆಟಗಾರರನ್ನು ಪಾಕಿಸ್ತಾನಕ್ಕೆ ಕಳುಹಿಸಬಾರದು. ಎಚ್ಚರಿಕೆಯನ್ನು ಮೀರಿ ಆಟಗಾರರು ಬಂದರೆ ಅವರ ಭದ್ರತೆಗೆ ನಾವು ಜವಾಬ್ದಾರರಲ್ಲ” ಎಂದು ಬೆದರಿಕೆ ಹಾಕಿದೆ. ಜೊತೆಗೆ ಪಂದ್ಯಾವಳಿಯನ್ನು ಅಡ್ಡಿಪಡಿಸುವುದಾಗಿ ಕೂಡ ಎಚ್ಚರಿಸಿದೆ.
ಈ ಬೆದರಿಕೆಗಳ ನಡುವೆಯೂ ಬಾಂಗ್ಲಾದೇಶ ತನ್ನ ಆಟಗಾರರಿಗೆ ಪಾಕಿಸ್ತಾನಕ್ಕೆ ತೆರಳಲು ಅನುಮತಿ ನೀಡಿದೆ. ಬಾಂಗ್ಲಾದೇಶದ ಪ್ರಮುಖ ಆಟಗಾರರಾದ ಮುಸ್ತಫಿಜುರ್ ರೆಹಮಾನ್, ಶರೀಫುಲ್ ಇಸ್ಲಾಂ, ಪರ್ವೇಜ್ ಹೊಸೇನ್ ಎಮನ್, ನಹೀದ್ ರಾಣಾ ಮತ್ತು ತಾನ್ಜಿದ್ ಹಸನ್ ತಮೀಮ್ ಸೇರಿದಂತೆ ಹಲವರು ಪಿಎಸ್ಎಲ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಇವರಲ್ಲಿ ಲಾಹೋರ್ ಖಲಂದರ್ಸ್ ತಂಡಕ್ಕೆ ಮುಸ್ತಾಫಿಜುರ್ ರೆಹಮಾನ್ ಮತ್ತು ಪರ್ವೇಜ್ ಹುಸೇನ್ ಸೇರಿದ್ದರೆ, ಪೇಶಾವರ್ ಝಲ್ಮಿ ಪರ ಶೋರಿಫುಲ್ ಇಸ್ಲಾಂ, ನಹಿದ್ ರಾಣಾ ಮತ್ತು ತಂಜಿದ್ ಹಸನ್ ತಮೀಮ್ ಕಣಕ್ಕಿಳಿಯಲಿದ್ದಾರೆ. ಇನ್ನೂ ರಿಯಾದ್ ಹುಸೇನ್ ರಾವಲ್ಪಿಂಡಿ ತಂಡದ ಭಾಗವಾಗಿದ್ದಾರೆ.
ಒಟ್ಟಾರೆ, ಪಿಎಸ್ಎಲ್ 2026 ಆರಂಭಕ್ಕೂ ಮುನ್ನವೇ ಭದ್ರತಾ ಭೀತಿ, ಇಂಧನ ಸಂಕಷ್ಟ ಮತ್ತು ಆಟಗಾರರ ಲಭ್ಯತೆ ಸಮಸ್ಯೆಗಳು ಪಿಸಿಬಿಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ.