ಬೆಂಗಳೂರು, ಫೆ. 13 (DaijiworldNews/AA): ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಪಂದ್ಯ ಆಯೋಜಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಸರ್ಕಾರ ಆರ್ಸಿಬಿ ಅಭಿಮಾನಿಗಳಿಗೆ ಗುಡ್ನ್ಯೂಸ್ ನೀಡಿದೆ.

ಗುರುವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸರ್ಕಾರ ಅನುಮತಿ ನೀಡಿದೆ. ಒಂದು ಪಂದ್ಯಕ್ಕೆ 35 ಸಾವಿರಕ್ಕಿಂತ ಹೆಚ್ಚು ಜನ ಸೇರಬಾರದು ಎಂಬ ಷರತ್ತಿನೊಂದಿಗೆ ಅನುಮತಿ ನೀಡಿದೆ. ಆದಾಗ್ಯೂ ಕೆಎಸ್ಸಿಎ ನೀಡಿರುವ ಭರವಸೆಗಳನ್ನು ಪಾಲಿಸಿದಿದ್ದರೆ ಅನುಮತಿ ಬಗ್ಗೆ ಪುನರ್ ಪರಿಶೀಲನೆ ಮಾಡುವುದಾಗಿಯೂ ಸಚಿವ ಸಂಪುಟದಲ್ಲಿ ತಿಳಿಸಲಾಗಿದೆ.
ಗೃಹ ಇಲಾಖೆ ಕಮಿಟಿ ಸಿದ್ಧಪಡಿಸಿರುವ ವರದಿಯ ಆಧಾರದ ಮೇಲೆ ಪಂದ್ಯ ಆಯೋಜಿಸಲು ನಿರ್ಧರಿಸಲಾಗಿದೆ. ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜಿಸುವ ಸಂಬಂಧ ನ್ಯಾ. ಮೈಕಲ್ ಡಿ ಕುನ್ಹಾ ವರದಿಯಲ್ಲಿ ಉಲ್ಲೇಖಿಸಿರುವ ಸಮಸ್ಯೆಗಳನ್ನು ಬಗೆಹರಿಸಲು ಈಗ ಕೆಎಸ್ಸಿಎ ಈಗ ಮುಂದಾಗಿದೆ.
ಅಂಬುಲೆನ್ಸ್ ಓಡಾಟಕ್ಕೆ ಜಾಗ, ಪಾರ್ಕಿಂಗ್ ವ್ಯವಸ್ಥೆ, ತುರ್ತು ನಿರ್ಗಮನ, ಅಗಲವಾದ ಗೇಟ್ಗಳು, ಮಹಿಳೆಯರಿಗೆ ಪ್ರತ್ಯೇಕ ಮಾರ್ಗ ಸೇರಿ ಎಲ್ಲಾ ಮಾರ್ಗಸೂಚಿಗಳನ್ನು ಸರಿಪಡಿಸುವ ಕೆಲಸ ಸಾಗುತ್ತಿದೆ. ಹೀಗಾಗಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಬಹುದು ಎಂದು ಎಕ್ಸ್ಪರ್ಟ್ ಕಮಿಟಿ ವರದಿ ನೀಡತ್ತು. ಇದೀಗ ಎಕ್ಸ್ಪರ್ಟ್ ಕಮಿಟಿ ವರದಿಯ ಮೇಲೆ ಸಚಿವ ಸಂಪುಟದಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ.