ನವದೆಹಲಿ, ಫೆ. 11 (DaijiworldNews/TA): ಭಾರತ ತಂಡದ ಸ್ಫೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವ ಆಟಗಾರರಿಗೆ ಹೊಟ್ಟೆಯ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಮುಂದುವರಿದಿದೆ. ಹೀಗಾಗಿ ಫೆಬ್ರವರಿ 12ರಂದು ನಡೆಯಲಿರುವ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆ ಕಡಿಮೆಯಾಗಿದೆ.

ಯುಎಸ್ಎ ವಿರುದ್ಧದ ಪಂದ್ಯದ ಬಳಿಕ ಟೀಮ್ ಇಂಡಿಯಾ ಆಟಗಾರರು ದ್ವಿತೀಯ ಪಂದ್ಯಕ್ಕಾಗಿ ಭಾನುವಾರ ದೆಹಲಿಗೆ ಆಗಮಿಸಿದ್ದರು. ದೆಹಲಿಯ ತಮ್ಮ ನಿವಾಸದಲ್ಲಿ ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಭೋಜನ ಕೂಟ ಏರ್ಪಡಿಸಿದ್ದರು. ಈ ವೇಳೆ ಅಭಿಷೇಕ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಭಿಷೇಕ್ ಮಂಗಳವಾರದವರೆಗೆ ಆಸ್ಪತ್ರೆಯಲ್ಲೇ ಉಳಿದಿದ್ದಾರೆ. ಹೀಗಾಗಿ ಗುರುವಾರ ನಡೆಯಲಿರುವ ನಮೀಬಿಯಾ ವಿರುದ್ಧದ ಪಂದ್ಯಕ್ಕೆ ಅವರು ಲಭ್ಯರಾಗುವುದು ಅನುಮಾನಾಸ್ಪದವಾಗಿದೆ.
ಅಭಿಷೇಕ್ ಶರ್ಮಾ ಹೊರಗುಳಿದರೆ ಅವರ ಬದಲಿಗೆ ಸಂಜು ಸ್ಯಾಮ್ಸನ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇತ್ತೀಚಿನ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಇನಿಂಗ್ಸ್ ಆರಂಭಿಸುತ್ತಿದ್ದರು. ಆದರೆ ನ್ಯೂಜಿಲೆಂಡ್ ವಿರುದ್ಧ ಕಳಪೆ ಪ್ರದರ್ಶನದ ಬಳಿಕ ಸ್ಯಾಮ್ಸನ್ ಅವರನ್ನು ಹೊರಗಿಟ್ಟು ಇಶಾನ್ ಕಿಶನ್ ಅವರಿಗೆ ಅವಕಾಶ ನೀಡಲಾಗಿತ್ತು. ಇದೀಗ ಅಭಿಷೇಕ್ ಅಲಭ್ಯರಾದರೆ, ನಮೀಬಿಯಾ ವಿರುದ್ಧ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಜೋಡಿ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ನಮೀಬಿಯಾ ವಿರುದ್ಧದ ಪಂದ್ಯದ ಬಳಿಕ ಭಾರತ ತಂಡ ಪಾಕಿಸ್ತಾನ ಹಾಗೂ ನೆದರ್ಲ್ಯಾಂಡ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಆ ವೇಳೆಗೆ ಅಭಿಷೇಕ್ ಸಂಪೂರ್ಣ ಫಿಟ್ನೆಸ್ ಹೊಂದಿ ತಂಡ ಸೇರಿಕೊಳ್ಳುವ ನಿರೀಕ್ಷೆ ಇದೆ.
ಟಿ20 ವಿಶ್ವಕಪ್ಗೆ ಭಾರತ ತಂಡ : ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.