ಬೆಂಗಳೂರು, ಫೆ. 09 (DaijiworldNews/AA): ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಪಂದ್ಯ ನಮ್ಮ ಕಡೆಯಿಂದ ಕ್ಲಿಯರೆನ್ಸ್ ಸಿಗಬೇಕಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜಸ್ಟೀಸ್ ಕುನ್ಹಾ ಅವರ ವರದಿಯ ಶಿಫಾರಸು ಪಾಲಿಸಬೇಕು ಅಂತ ಹೇಳಿದ್ದೀವಿ. ಸರ್ಕಾರದಿಂದ ಜಿಬಿಎ ಹಾಗೂ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಮಿತಿ ಕೂಡಾ ರಚಿಸಲಾಗಿತ್ತು. ಸಮಿತಿಯು ಕೂಡಾ ಒಂದಷ್ಟು ಶಿಫಾರಸು ಮಾಡಿದೆ. ಐಪಿಎಲ್ ಮ್ಯಾಚ್ಗಳು ಬರ್ತಿವೆ. ನಮ್ಮ ಕಡೆಯಿಂದ ಕ್ಲಿಯರೆನ್ಸ್ ಸಿಗಬೇಕಿದೆ. ಬುಧವಾರ ನಾನು ಸಭೆ ಕರೆದಿದ್ದೇನೆ. ಸರ್ಕಾರದ ಹಂತದಲ್ಲಿ ಏನು ಮಾಡಬೇಕೋ, ಅವರಿಗೆ ಏನು ಸೂಚನೆ ಕೊಡಬೇಕೋ ಅಂತ ನೋಡ್ತೇವೆ" ಎಂದರು.
"ಸಿಎಂ ಜತೆಗೂ ಚರ್ಚೆ ಮಾಡಬೇಕಾಗಿದೆ. ನಮ್ಮ ಶಿಫಾರಸನ್ನು ಅವರು ಎಷ್ಟರ ಮಟ್ಟಿಗೆ ಪೂರೈಸಿದ್ದಾರೆ ಅಂತ ನೋಡಿ ತೀರ್ಮಾನ ಮಾಡ್ತೇವೆ. ಬೆಂಗಳೂರಿನಲ್ಲಿ ಮ್ಯಾಚ್ ಆಗಬೇಕು ಅಂತ ಅಭಿಮಾನಿಗಳು ಬಯಸ್ತಿದ್ದಾರೆ. ಆದರೆ, ಸುರಕ್ಷತೆಯನ್ನೂ ನೋಡಬೇಕು, ಕಾಲ್ತುಳಿತದಂಥ ಘಟನೆಗಳು ಮರುಕಳಿಸಬಾರದಲ್ಲ. ಎಲ್ಲವನ್ನೂ ನೋಡಿ ತೀರ್ಮಾನಿಸುತ್ತೇವೆ" ಎಂದು ತಿಳಿಸಿದರು.