ಮುಂಬೈ, ಫೆ. 09 (DaijiworldNews/TA): ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೆಎಲ್ ರಾಹುಲ್ ಭರ್ಜರಿ ಶತಕ ಸಿಡಿಸಿ ಕರ್ನಾಟಕ ತಂಡವನ್ನು ಸೆಮಿಫೈನಲ್ ಗಡಿಗೆ ತಂದು ನಿಲ್ಲಿಸಿದ್ದಾರೆ. ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ, ಕರ್ನಾಟಕ ವಿರುದ್ಧ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವನ್ನು ಕರ್ನಾಟಕದ ಬೌಲರ್ಗಳು ಮೊದಲ ಇನಿಂಗ್ಸ್ನಲ್ಲಿ ಕೇವಲ 120 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಕರ್ನಾಟಕ ಪರ ಮಯಾಂಕ್ ಅಗರ್ವಾಲ್ 92 ರನ್ಗಳ ಭರ್ಜರಿ ಇನ್ನಿಂಗ್ಸ್ ಆಡಿದರೂ, ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಬೆಂಬಲ ಲಭಿಸಲಿಲ್ಲ. ಪರಿಣಾಮ ಕರ್ನಾಟಕ ತಂಡ 173 ರನ್ಗಳಿಗೆ ಆಲೌಟ್ ಆಗಿ, 53 ರನ್ಗಳ ಮುನ್ನಡೆ ಪಡೆದಿತು.
53 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡ ಪರ ಆಕಾಶ್ ಆನಂದ್ 70 ರನ್ಗಳ ಕೊಡುಗೆ ನೀಡಿದರು. ಯಶಸ್ವಿ ಜೈಸ್ವಾಲ್ 36 ರನ್ ಗಳಿಸಿದರೆ, ತನುಷ್ ಕೋಟ್ಯಾನ್ ಅಜೇಯ 48 ರನ್ ಬಾರಿಸಿದರು. ಈ ಮೂಲಕ ಮುಂಬೈ ತಂಡ ದ್ವಿತೀಯ ಇನಿಂಗ್ಸ್ನಲ್ಲಿ 377 ರನ್ಗಳಿಗೆ ಆಲೌಟ್ ಆಯಿತು.
325 ರನ್ಗಳ ಗುರಿ ಬೆನ್ನತ್ತಿದ ಕರ್ನಾಟಕ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್ ಕೇವಲ 3 ರನ್ಗಳಿಗೆ ಔಟಾದರು. ಬಳಿಕ ದೇವದತ್ತ್ ಪಡಿಕ್ಕಲ್ 39 ರನ್ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು.
ಇನ್ನೊಂದೆಡೆ ಕ್ರೀಸ್ ಕಚ್ಚಿಕೊಂಡು ಆಡಿದ ಕೆಎಲ್ ರಾಹುಲ್ 147 ಎಸೆತಗಳಲ್ಲಿ 13 ಫೋರ್ಗಳೊಂದಿಗೆ ಭರ್ಜರಿ ಶತಕ ಪೂರೈಸಿದರು. ರಾಹುಲ್ ಅವರ ಸ್ಥಿರ ಮತ್ತು ಜವಾಬ್ದಾರಿಯುತ ಬ್ಯಾಟಿಂಗ್ ಕರ್ನಾಟಕ ತಂಡದ ಗೆಲುವಿನ ಆಸೆಗೆ ಬಲ ತುಂಬಿದೆ.
47 ಓವರ್ಗಳ ಅಂತ್ಯದ ವೇಳೆಗೆ ಕರ್ನಾಟಕ ತಂಡ 3 ವಿಕೆಟ್ ಕಳೆದುಕೊಂಡು 209 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ಕೆಎಲ್ ರಾಹುಲ್ ಹಾಗೂ ಸ್ಮರಣ್ ರವಿಚಂದ್ರನ್ ಬ್ಯಾಟಿಂಗ್ ಮುಂದುವರೆಸಿದ್ದು, ಇನ್ನೂ 116 ರನ್ ಗಳಿಸಿದರೆ ಕರ್ನಾಟಕ ತಂಡ ಪಂದ್ಯ ಗೆದ್ದು ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ.