ದುಬೈ, ಫೆ. 09 (DaijiworldNews/ AK): ಭಾರತದ ವಿರುದ್ಧ ಟಿ20 ವಿಶ್ವಕಪ್ ಪಂದ್ಯವಾಡಲು ಭಾರೀ ಡ್ರಾಮಾ ನಡೆಸುತ್ತಿರುವ ಪಾಕಿಸ್ತಾನ ಈಗ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಮುಂದೆ ಮೂರು ಮಹತ್ವದ ಬೇಡಿಕೆ ಮುಂದಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

ಫೆ.15 ರಂದು ಶ್ರೀಲಂಕಾದ ಕೊಲಂಬೋದಲ್ಲಿ ಭಾರತದ ವಿರುದ್ಧ ನಿಗದಿಯಾಗಿದ್ದ ಪಂದ್ಯವನ್ನು ಬಹಿಷ್ಕರಿಸಿದ್ದಕ್ಕೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ಗೆ ಐಸಿಸಿ ಸಂಭಾವ್ಯ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿತ್ತು. ಐಸಿಸಿ ಎಚ್ಚರಿಕೆಯ ಬೆನ್ನಲ್ಲೇ ಈಗ ಪಿಸಿಬಿ ಭಾರತದ ವಿರುದ್ಧ ಪಂದ್ಯವಾಡಲು ಒಪ್ಪಿಗೆ ನೀಡಲು ಮುಂದಾಗಿದ್ದರೂ ಮೂರು ಬೇಡಿಕೆಗಳನ್ನು ಮುಂದಿಟ್ಟಿದೆ.
ಮೋದು ಬೇಡಿಕೆಯಲ್ಲಿ ಮೊದಲನೆಯದು, ಐಸಿಸಿಯಿಂದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಆದಾಯವನ್ನು ಹೆಚ್ಚಿಸಬೇಕು. ಭಾರತ ಮತ್ತು ಪಾಕಿಸ್ತಾನ್ ನಡುವಣ ದ್ವಿಪಕ್ಷೀಯ ಸರಣಿಯನ್ನು ಮತ್ತೆ ಆರಂಭಿಸಬೇಕೆಂದು ಪಿಸಿಬಿ ಆಗ್ರಹಿಸಿದೆ. ಇದಕ್ಕಾಗಿ ಐಸಿಸಿ ಮುಖ್ಯ ಪಾತ್ರವಹಿಸಬೇಕು. ಈ ಮೂಲಕ ಭಾರತ ಮತ್ತು ಪಾಕಿಸ್ತಾನ್ ನಡುವಣ ಸರಣಿಯನ್ನು ಪುನಃಸ್ಥಾಪಿಸುವ ಭರವಸೆ ನೀಡಬೇಕೆಂದು ಪಿಸಿಬಿ ಆಗ್ರಹಿಸಿದೆ.
ಕ್ರೀಡಾ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು. ಪಂದ್ಯಗಳ ವೇಳೆ ಹ್ಯಾಂಡ್ಶೇಕ್ ಪ್ರೋಟೋಕಾಲ್ ಜಾರಿ ಮಾಡಬೇಕು. ಈ ಪ್ರೊಟೋಕಾಲ್ ಪ್ರಕಾರ ಭಾರತ ಮತ್ತು ಪಾಕಿಸ್ತಾನ್ ಆಟಗಾರರು ಹ್ಯಾಂಡ್ಶೇಕ್ ಮಾಡುವುದನ್ನು ಕಡ್ಡಾಯ ಮಾಡಬೇಕೆಂದು ಪಿಸಿಬಿ ಬೇಡಿಕೆಯಿಟ್ಟಿದೆ. ಈ ಮೂರು ಬೇಡಿಕೆಗಳೊಂದಿಗೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹಾಗೂ ಐಸಿಸಿ ಅಧಿಕಾರಿಗಳ ನಡುವೆ ಚರ್ಚೆ ಮುಂದುವರೆದಿದೆ. ಅಲ್ಲದೆ ಇಂದು (ಫೆ.9) ಐಸಿಸಿ-ಪಿಸಿಬಿ ಅಧಿಕಾರಿಗಳ ನಡುವೆ ಲಾಹೋರ್ನಲ್ಲಿ ಈ ಕುರಿತಾದ ವಿಶೇಷ ಸಭೆ ನಡೆಯಲಿದ್ದು, ಈ ವೇಳೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.