ಮುಂಬೈ, ಫೆ. 07 (DaijiworldNews/TA): ಪ್ರತಿ ವರ್ಷ ಟೀಮ್ ಇಂಡಿಯಾ ಆಟಗಾರರೊಂದಿಗೆ ಕೇಂದ್ರ ಒಪ್ಪಂದ ಮಾಡಿಕೊಳ್ಳುವ ಬಿಸಿಸಿಐ 2026ರ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳಿಗೆ ಸಿದ್ಧತೆ ಆರಂಭಿಸಿದೆ. ಈ ಬಾರಿ ಪ್ರಕಟವಾಗಲಿರುವ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ಭಾರತ ಕ್ರಿಕೆಟ್ನ ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಹಿಂಬಡ್ತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿದ್ದಾರೆ.

ಪ್ರಸ್ತುತ ಮಾಹಿತಿಯ ಪ್ರಕಾರ, 2026ರ ಒಪ್ಪಂದ ಪಟ್ಟಿಯಲ್ಲಿ A+ ಗ್ರೇಡ್ ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದು, ಕೇವಲ A, B ಮತ್ತು C ಗ್ರೇಡ್ಗಳು ಮಾತ್ರ ಇರಲಿವೆ. ಈ ಹೊಸ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು B ಗ್ರೇಡ್ನಲ್ಲಿ ಸೇರಿಸಲಾಗಿದೆ. ಈ ಹಿಂದೆ ಇಬ್ಬರೂ A+ ಗ್ರೇಡ್ನಲ್ಲಿ ಸ್ಥಾನ ಪಡೆದಿದ್ದರು.
ಗ್ರೇಡ್ ಹಿಂಬಡ್ತಿಯ ಪರಿಣಾಮವಾಗಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ನೀಡಲಾಗುತ್ತಿದ್ದ ವಾರ್ಷಿಕ 5 ಕೋಟಿ ರೂ. ಸಂಭಾವನೆ ಇದೀಗ 3 ಕೋಟಿ ರೂ.ಗೆ ಇಳಿಕೆಯಾಗಿದೆ. ಈ ನಿರ್ಧಾರ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಯನ್ನು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಯುಗಾಂತ್ಯದ ಮುನ್ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೂಲಗಳ ಪ್ರಕಾರ, 2027ರ ಏಕದಿನ ವಿಶ್ವಕಪ್ ನಂತರ ಇಬ್ಬರೂ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ಇದರ ಮುನ್ನುಡಿಯಾಗಿ ಈಗಲೇ ಅವರಿಗೆ ಒಪ್ಪಂದ ಪಟ್ಟಿಯಲ್ಲಿ ಹಿಂಬಡ್ತಿ ನೀಡಲಾಗಿದೆ.
ಈ ಬಾರಿಯ ಒಪ್ಪಂದದಲ್ಲಿ A ಗ್ರೇಡ್ ಸ್ಥಾನ ಪಡೆದಿರುವವರು ಕೇವಲ ಮೂವರು ಆಟಗಾರರು. ಅವರಿಗೆ ಭಾರತ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್, ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ ಸೇರಿದ್ದಾರೆ. 2026ರ ಕೇಂದ್ರ ಒಪ್ಪಂದದಲ್ಲಿ ಈ ಬದಲಾವಣೆಗಳು ಟೀಮ್ ಇಂಡಿಯಾದ ಭವಿಷ್ಯದ ರೂಪುರೇಷೆಗಳನ್ನು ಸೂಚಿಸುತ್ತಿದ್ದು, ಯುವ ಆಟಗಾರರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ನಿಟ್ಟಿನಲ್ಲಿ ಬಿಸಿಸಿಐ ಮುಂದಾಗಿದೆ ಎನ್ನಲಾಗುತ್ತಿದೆ.