ವಡೋದರಾ, ಫೆ. 05 (DaijiworldNews/AA): ವುಮೆನ್ ಪ್ರೀಮಿಯರ್ ಲೀಗ್ನ 2026 ರ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಣಿಸಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.

ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 2024ರಲ್ಲಿ ಚಾಂಪಿಯನ್ ಆಗಿದ್ದ ಆರ್ಸಿಬಿ ಮಹಿಳಾ ತಂಡವು, 2026ರಲ್ಲಿ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡವು ಆರ್ಸಿಬಿಗೆ 203 ರನ್ಗಳ ಬೃಹತ್ ಮೊತ್ತದ ಗುರಿ ನೀಡಿತು. ಈ ಬೃಹತ್ ಗುರಿ ಬೆನ್ನಟ್ಟಿದ ಆರ್ಸಿಬಿ 19.4 ಓವರ್ಗಳಲ್ಲಿ 204 ರನ್ ಗಳಿಸಿ ಎರಡನೇ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
4ನೇ ಆವೃತ್ತಿಯ ವುಮೆನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯವು ಮಾಜಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಳೆದ 3 ಆವೃತ್ತಿಗಳ ರನ್ನರ್-ಅಪ್ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು.
ಲೀಗ್ ಹಂತ 8 ಪಂದ್ಯಗಳ ಪೈಕಿ 6 ರಲ್ಲಿ ಗೆದ್ದಿರುವ ಆರ್ಸಿಬಿ ನೇರವಾಗಿ ಫೈನಲ್ ಪ್ರವೇಶಿಸಿದರೆ ಡೆಲ್ಲಿ ಲೀಗ್ನಲ್ಲಿ 4 ಪಂದ್ಯ ಗೆದ್ದು ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಸೋಲಿಸಿ ಪೈನಲ್ ಹಂತ ತಲುಪಿತ್ತು.