ಮುಂಬೈ, ಫೆ. 05 (DaijiworldNews/TA): ಆಸ್ಟ್ರೇಲಿಯಾ ತಂಡದ ಸ್ಫೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್ವೆಲ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಹೊರಗುಳಿದ ಬೆನ್ನಲ್ಲೇ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್ಎಲ್) ನಲ್ಲಿ ಕಣಕ್ಕಿಳಿಯುವ ನಿರ್ಧಾರ ಕೈಗೊಂಡಿದ್ದರು. ಆದರೆ ಇದೀಗ ಪಿಎಸ್ಎಲ್ನಿಂದಲೂ ಮ್ಯಾಕ್ಸ್ವೆಲ್ ಹಿಂದೆ ಸರಿದಿದ್ದಾರೆ.

ಐಪಿಎಲ್ನಲ್ಲಿ ಸತತ 13 ಸೀಸನ್ಗಳ ಕಾಲ ಆಡಿದ್ದ ಗ್ಲೆನ್ ಮ್ಯಾಕ್ಸ್ವೆಲ್, ಪಿಎಸ್ಎಲ್ನ 11ನೇ ಆವೃತ್ತಿಯಲ್ಲಿ ಪೇಶಾವರ್ ಝಲ್ಮಿ ತಂಡದ ಪರ ಆಡಲಿದ್ದಾರೆ ಎಂದು ವರದಿಯಾಗಿತ್ತು. ಪೇಶಾವರ್ ಝಲ್ಮಿ ಫ್ರಾಂಚೈಸಿ ಡೈರೆಕ್ಟ್ ಸೈನಿಂಗ್ ಆಯ್ಕೆಯ ಮೂಲಕ ಮ್ಯಾಕ್ಸ್ವೆಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಇದೀಗ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಗ್ಲೆನ್ ಮ್ಯಾಕ್ಸ್ವೆಲ್ ಪಾಕಿಸ್ತಾನ್ ಸೂಪರ್ ಲೀಗ್ನಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ. ಈ ವೈಯಕ್ತಿಕ ಕಾರಣಗಳ ಹಿಂದೆ ಸಂಭಾವನೆ ವಿಷಯವೇ ಪ್ರಮುಖ ಕಾರಣ ಎನ್ನುವ ಮಾತುಗಳು ಕ್ರಿಕೆಟ್ ವಲಯದಲ್ಲಿ ಜೋರಾಗಿ ಕೇಳಿಬರುತ್ತಿವೆ.
ಪೇಶಾವರ್ ಝಲ್ಮಿ ತಂಡವು ಮ್ಯಾಕ್ಸ್ವೆಲ್ ಅವರಿಗೆ ಪಿಎಸ್ಎಲ್ಗಾಗಿ 4.5 ಕೋಟಿ ಪಾಕಿಸ್ತಾನ್ ರೂಪಾಯಿ ಸಂಭಾವನೆ ನೀಡಲು ಮುಂದಾಗಿತ್ತು ಎನ್ನಲಾಗಿದೆ. ಇದು ಭಾರತೀಯ ಮೌಲ್ಯದಲ್ಲಿ ಸುಮಾರು 1.47 ಕೋಟಿ ರೂಪಾಯಿಗೆ ಸಮಾನವಾಗುತ್ತದೆ. ಈ ಮೊತ್ತ ಮ್ಯಾಕ್ಸ್ವೆಲ್ಗೆ ತೃಪ್ತಿಕರವಾಗಿರಲಿಲ್ಲ ಎಂಬ ಕಾರಣಕ್ಕೆ ಅವರು ಪಿಎಸ್ಎಲ್ ಆಡದ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಗಮನಾರ್ಹವೆಂದರೆ, ಕಳೆದ ಸೀಸನ್ನಲ್ಲಿ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಅವರಿಗೆ 4.20 ಕೋಟಿ ರೂಪಾಯಿ ಸಂಭಾವನೆ ಲಭಿಸಿತ್ತು. ಈ ಹೋಲಿಕೆಯಲ್ಲಿ ಪಿಎಸ್ಎಲ್ನಲ್ಲಿ ನೀಡಲಾದ ಮೊತ್ತ ಬಹಳ ಕಡಿಮೆ ಎನ್ನಲಾಗುತ್ತಿದ್ದು, ಅದೇ ಕಾರಣಕ್ಕೆ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟು ಮ್ಯಾಕ್ಸ್ವೆಲ್ ಪಾಕಿಸ್ತಾನ್ ಸೂಪರ್ ಲೀಗ್ಗೆ ಕೈಕೊಟ್ಟಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.