ಉಡುಪಿ, ಫೆ. 04 (DaijiworldNews/AA): ಮಹಾರಾಷ್ಟ್ರದ ನಾಸಿಕ್ನಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಉಡುಪಿಯ ಕೊರಂಗ್ರಪಾಡಿ ನಿವಾಸಿ, ನಿವೃತ್ತ ಪದವಿ ಶಿಕ್ಷಕಿ ಜಯ ತಂತ್ರಿ ಕೆ. ಅವರು ಅದ್ಭುತ ಪ್ರದರ್ಶನ ನೀಡುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.


ಮಹಾರಾಷ್ಟ್ರದ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ಜನವರಿ 28 ರಿಂದ 31 ರವರೆಗೆ ಈ ರಾಷ್ಟ್ರಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿತ್ತು. 65 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ವಿಭಾಗದಲ್ಲಿ ಸ್ಪರ್ಧಿಸಿದ್ದ ಜಯ ತಂತ್ರಿ ಅವರು ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನುಪ್ರದರ್ಶಿಸಿದರು.
ಜಯ ತಂತ್ರಿ ಅವರು ಶಾಟ್ ಪುಟ್, ಟೇಬಲ್ ಟೆನಿಸ್ ಮತ್ತು ರಿಲೇ ರೇಸ್ ನಲ್ಲಿ ಚಿನ್ನದ ಪದಕ, ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, ಮಿಕ್ಸೆಡ್ ರಿಲೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಇಳಿವಯಸ್ಸಿನಲ್ಲೂ ಜಯ ತಂತ್ರಿ ಅವರು ಮಾಡಿದ ಈ ಸಾಧನೆಗೆ ಕ್ರೀಡಾಭಿಮಾನಿಗಳು ಮತ್ತು ಸ್ಥಳೀಯ ನಿವಾಸಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.