ಮುಂಬೈ, ಫೆ. 03 (DaijiworldNews/TA): ಟಿ20 ವಿಶ್ವಕಪ್ನ 2ನೇ ಅಭ್ಯಾಸ ಪಂದ್ಯದಲ್ಲಿ ಭಾರತ ಎ ತಂಡವು ಯುಎಸ್ಎ ವಿರುದ್ಧ 38 ರನ್ಗಳ ಭರ್ಜರಿ ಜಯ ಸಾಧಿಸಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್ಎ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡಕ್ಕೆ ಪ್ರಿಯಾಂಶ್ ಆರ್ಯ ಮತ್ತು ನಾರಾಯಣ್ ಜಗದೀಸನ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ ಈ ಜೋಡಿ 43 ರನ್ಗಳ ಜೊತೆಯಾಟ ನೀಡಿತು. ಪ್ರಿಯಾಂಶ್ ಆರ್ಯ 28 ರನ್ಗಳಿಗೆ ಔಟಾದರೂ, ಮತ್ತೊಂದೆಡೆ ನಾರಾಯಣ್ ಜಗದೀಸನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದ ಅವರು, 55 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 105 ರನ್ ಬಾರಿಸಿ ಮಿಂಚಿದರು.
ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಿಲಕ್ ವರ್ಮಾ 24 ಎಸೆತಗಳಲ್ಲಿ 2 ಸಿಕ್ಸ್ ಮತ್ತು 3 ಫೋರ್ಗಳೊಂದಿಗೆ 38 ರನ್ ಗಳಿಸಿದರು. ಈ ಇನಿಂಗ್ಸ್ ಮೂಲಕ ಅವರು ತಮ್ಮ ಫಿಟ್ನೆಸ್ನ್ನು ಸಾಬೀತುಪಡಿಸಿದ್ದು, ಮುಂಬರುವ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪರ ಅವಕಾಶ ಪಡೆಯುವುದು ಬಹುತೇಕ ಖಚಿತವಾಗಿದೆ. ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಆಯುಷ್ ಬದೋನಿ ಅಜೇಯ ಆಟವಾಡಿದರು. ಅವರು 26 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 60 ರನ್ಗಳಿಸಿದರು. ಇದರ ನೆರವಿನಿಂದ ಭಾರತ ಎ ತಂಡವು 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 238 ರನ್ಗಳ ಭಾರೀ ಮೊತ್ತ ಕಲೆಹಾಕಿತು.
239 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಯುಎಸ್ಎ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ಮೊತ್ತ 33 ರನ್ ಆಗುವಷ್ಟರಲ್ಲಿ ಎರಡು ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿತು. ಆದರೂ ಆರಂಭಿಕ ಬ್ಯಾಟರ್ ಆಂಡ್ರೀಸ್ ಗೌಸ್ 44 ರನ್ಗಳ ಉಪಯುಕ್ತ ಇನಿಂಗ್ಸ್ ಆಡಿದರು. ಮಧ್ಯಮ ಕ್ರಮಾಂಕದಲ್ಲಿ ಸಂಜಯ್ ಕೃಷ್ಣಮೂರ್ತಿ ಕೇವಲ 18 ಎಸೆತಗಳಲ್ಲಿ 4 ಸಿಕ್ಸ್ ಮತ್ತು 2 ಫೋರ್ಗಳೊಂದಿಗೆ 41 ರನ್ ಚಚ್ಚಿದರು. ಜೊತೆಗೆ ಶುಭಮ್ ರಂಜಾನೆ 28 ರನ್ ಹಾಗೂ ಹರ್ಮೀತ್ ಸಿಂಗ್ 25 ರನ್ಗಳ ಕೊಡುಗೆ ನೀಡಿದರು. ಆದರೆ ಯುಎಸ್ಎ ತಂಡವು 19.4 ಓವರ್ಗಳಲ್ಲಿ 200 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ಎ ತಂಡವು 38 ರನ್ಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿತು.
ಭಾರತ ಎ ತಂಡ: ಆಯುಷ್ ಬದೋನಿ (ನಾಯಕ), ನಮನ್ ಧೀರ್, ಅಶುತೋಷ್ ಶರ್ಮಾ, ಪ್ರಿಯಾಂಶ್ ಆರ್ಯ, ನಾರಾಯಣ್ ಜಗದೀಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ರಿಯಾನ್ ಪರಾಗ್, ಮಾನವ್ ಸುತಾರ್, ಅಶೋಕ್ ಶರ್ಮಾ, ಉರ್ವಿಲ್ ಪಟೇಲ್ (ವಿಕೆಟ್ ಕೀಪರ್), ಗುರ್ಜಪ್ನೀತ್ ಸಿಂಗ್, ವಿಪ್ರಾಜ್ ನಿಗಮ್, ರವಿ ಬಿಷ್ಣೋಯ್, ಖಲೀಲ್ ಅಹ್ಮದ್, ಮಯಾಂಕ್ ಯಾದವ್.
ಯುಎಸ್ಎ ತಂಡ: ಮೊನಾಂಕ್ ಪಟೇಲ್ (ನಾಯಕ), ಜೆಸ್ಸಿ ಸಿಂಗ್, ಆಂಡ್ರೀಸ್ ಗೌಸ್, ಶೆಹನ್ ಜಯಸೂರ್ಯ, ಮಿಲಿಂದ್ ಕುಮಾರ್, ಶಯಾನ್ ಜಹಾಂಗೀರ್, ಸೈತೇಜ ಮುಕ್ಕಮಲ, ಸಂಜಯ್ ಕೃಷ್ಣಮೂರ್ತಿ, ಹರ್ಮೀತ್ ಸಿಂಗ್, ನೋಸ್ತೂಶ್ ಕೆಂಜಿಗೆ, ಶಾಡ್ಲಿ ವ್ಯಾನ್ ಶಾಲ್ಕ್ವಿಕ್, ಸೌರಭ್ ನೇತ್ರವಾಲ್ಕರ್, ಅಲಿ ಖಾನ್, ಮೊಹಮ್ಮದ್ ಮೊಹ್ಸಿನ್, ಶುಭಮ್ ರಂಜಾನೆ.