ನವದೆಹಲಿ, ಫೆ. 02 (DaijiworldNews/TA): ಟಿ20 ವಿಶ್ವಕಪ್ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ನಿರ್ಧಾರವು ಅಂತರರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದ್ದು, ಈ ವಿಚಾರದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕಠಿಣ ಕ್ರಮಕ್ಕೆ ಸಜ್ಜಾಗಿದೆ. ಫೆಬ್ರವರಿ 15ರಂದು ನಡೆಯಬೇಕಿರುವ ಭಾರತ–ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಿಂದ ದೂರ ಉಳಿಯುವ ನಿರ್ಧಾರವನ್ನು ಪಾಕಿಸ್ತಾನ ಸರ್ಕಾರ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಕುರಿತು ಐಸಿಸಿ ಗಂಭೀರ ಚಿಂತನೆ ನಡೆಸುತ್ತಿದೆ.

ವಿಶ್ವಕಪ್ನಿಂದ ಬಾಂಗ್ಲಾದೇಶವನ್ನು ಹೊರಗಿಟ್ಟಿರುವುದನ್ನು ವಿರೋಧಿಸಿ, ಕೊಲಂಬೊದಲ್ಲಿ ನಡೆಯಬೇಕಿದ್ದ ಭಾರತ–ಪಾಕ್ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರ ಪಾಕಿಸ್ತಾನ ಕೈಗೊಂಡಿದೆ. ಆದರೆ ಈ ನಿರ್ಧಾರವು ಐಸಿಸಿ ಹಾಗೂ ಬಿಸಿಸಿಐ ಜೊತೆ ಮಾಡಿಕೊಂಡಿರುವ ಒಪ್ಪಂದಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಐಸಿಸಿ ಮೂಲಗಳು ತಿಳಿಸಿವೆ. ಆಯ್ದ ತಂಡಗಳ ವಿರುದ್ಧ ಮಾತ್ರ ಪಂದ್ಯಗಳನ್ನು ಆಡಲು ಅವಕಾಶವಿಲ್ಲ ಎಂಬುದು ಐಸಿಸಿಯ ಸ್ಪಷ್ಟ ನಿಲುವಾಗಿದ್ದು, ಯಾವುದೇ ರಾಷ್ಟ್ರವು ವಿಶ್ವಕಪ್ನ ನಿಯಮಗಳನ್ನು ಮೀರಿ ನಡೆದುಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.
ಭಾರತ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿದಲ್ಲಿ, ಟಿ20 ವಿಶ್ವಕಪ್ನಿಂದ ಪಾಕಿಸ್ತಾನವನ್ನು ಸಂಪೂರ್ಣವಾಗಿ ಹೊರಗಟ್ಟುವ ಬಗ್ಗೆ ಐಸಿಸಿ ಪರಿಗಣನೆ ನಡೆಸುತ್ತಿದೆ ಎನ್ನಲಾಗಿದೆ. ಪಾಕಿಸ್ತಾನದ ಬದಲಿಗೆ ಉಗಾಂಡಾ ತಂಡವನ್ನು ವಿಶ್ವಕಪ್ಗೆ ಸೇರಿಸುವ ಆಯ್ಕೆಯೂ ಚರ್ಚೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಈ ನಿರ್ಧಾರ ಜಾರಿಯಾದರೆ, ಪಾಕಿಸ್ತಾನ ಕ್ರಿಕೆಟ್ಗೆ ಇದೊಂದು ದೊಡ್ಡ ಹಿನ್ನಡೆಯಾಗಲಿದೆ.
ಆರ್ಥಿಕವಾಗಿ ಕೂಡ ಪಾಕಿಸ್ತಾನಕ್ಕೆ ಭಾರೀ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಭಾರತ ವಿರುದ್ಧದ ಪಂದ್ಯವನ್ನು ಆಡದಿದ್ದರೆ, ಐಸಿಸಿಯಿಂದ ಪಿಸಿಬಿಗೆ ದೊರೆಯಬೇಕಾದ ವಾರ್ಷಿಕ 34.5 ಮಿಲಿಯನ್ ಡಾಲರ್ ಆದಾಯವನ್ನು ತಡೆಹಿಡಿಯಲಾಗುತ್ತದೆ. ಇದು ಭಾರತೀಯ ರೂಪಾಯಿಯಲ್ಲಿ ಸುಮಾರು 316 ಕೋಟಿ ರೂಪಾಯಿಗೆ ಸಮಾನವಾಗಿದೆ. ಇದರ ಜೊತೆಗೆ, ಪಂದ್ಯ ನಡೆಯದ ಕಾರಣ ಪ್ರಸಾರ ಹಕ್ಕು ಹೊಂದಿರುವ ಜಿಯೋ–ಸ್ಟಾರ್ ಸಂಸ್ಥೆಗೆ ಉಂಟಾಗುವ ನಷ್ಟವನ್ನೂ ಪಿಸಿಬಿಯೇ ಭರಿಸಬೇಕಾಗುತ್ತದೆ. ಈ ಒಂದೇ ಪಂದ್ಯದಿಂದ ಸುಮಾರು 200 ಕೋಟಿ ರೂಪಾಯಿಗಳ ಜಾಹೀರಾತು ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.
ಈ ವಿವಾದದ ಪರಿಣಾಮವಾಗಿ ಪಾಕಿಸ್ತಾನವನ್ನು ಮುಂಬರುವ ಏಷ್ಯಾಕಪ್ಗಳಿಂದಲೂ ನಿಷೇಧಿಸುವ ಸಾಧ್ಯತೆ ಇದೆ. ಅಲ್ಲದೆ, ಇತರ ಕ್ರಿಕೆಟ್ ಮಂಡಳಿಗಳು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿಗಳನ್ನು ನಡೆಸದಂತೆ ಐಸಿಸಿ ಒತ್ತಾಯಿಸಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. ಇದರಿಂದ ಪಾಕಿಸ್ತಾನ ಕ್ರಿಕೆಟ್ ಸಂಪೂರ್ಣವಾಗಿ ಪ್ರತ್ಯೇಕಗೊಳ್ಳುವ ಭೀತಿ ಎದುರಾಗುವ ಸಾಧ್ಯತೆ ಇದೆ.
ಇದರ ಪರಿಣಾಮ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್ಎಲ್) ಮೇಲೂ ಬೀರುವ ಆತಂಕ ವ್ಯಕ್ತವಾಗಿದೆ. ಪಿಎಸ್ಎಲ್ನಲ್ಲಿ ವಿದೇಶಿ ಆಟಗಾರರು ಭಾಗವಹಿಸುವುದನ್ನು ನಿರ್ಬಂಧಿಸುವ ನಿರ್ಧಾರ ಕೈಗೊಳ್ಳಲಾದರೆ, ಅಥವಾ ಆಟಗಾರರಿಗೆ ಎನ್ಒಸಿ ನೀಡದಂತೆ ಐಸಿಸಿ ಇತರ ಮಂಡಳಿಗಳಿಗೆ ಸೂಚಿಸಿದರೆ, ಪಿಎಸ್ಎಲ್ನ ವಾಣಿಜ್ಯ ಮೌಲ್ಯ ಕುಸಿದು ಅದರ ಅಸ್ತಿತ್ವವೇ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಭಾರತ–ಪಾಕಿಸ್ತಾನ ಪಂದ್ಯವನ್ನು ಬಹಿಷ್ಕರಿಸುವ ವಿಚಾರವಾಗಿ ಆರಂಭವಾದ ಈ ವಿವಾದ ಇದೀಗ ಪಾಕಿಸ್ತಾನ ಕ್ರಿಕೆಟ್ನ ಭವಿಷ್ಯವನ್ನೇ ಪ್ರಶ್ನಾರ್ಥಕವಾಗಿಸುವ ಹಂತಕ್ಕೆ ತಲುಪಿದ್ದು, ಐಸಿಸಿಯ ಮುಂದಿನ ನಿರ್ಧಾರಕ್ಕಾಗಿ ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿದೆ.