ಮುಂಬೈ, ಜ.30 (DaijiworldNews/TA): ಪ್ರಸ್ತುತ ಭಾರತೀಯ ಟೆಸ್ಟ್ ಹಾಗೂ ಏಕದಿನ ತಂಡದ ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿರುವ ಕನ್ನಡಿಗ ಕೆ.ಎಲ್. ರಾಹುಲ್, ನಿವೃತ್ತಿ ಬಗ್ಗೆ ಯೋಚಿಸಿದ್ದೇನೆ ಎಂಬ ಹೇಳಿಕೆ ನೀಡುವ ಮೂಲಕ ಕ್ರಿಕೆಟ್ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಭಾರತೀಯ ಟೆಸ್ಟ್ ತಂಡದಲ್ಲಿ ಆರಂಭಿಕ ಬ್ಯಾಟ್ಸ್ಮನ್ ಆಗಿ ಆಡುತ್ತಿರುವ ರಾಹುಲ್, ಏಕದಿನ ತಂಡದಲ್ಲಿ ಫಿನಿಷರ್ ಜೊತೆಗೆ ವಿಕೆಟ್ ಕೀಪರ್ ಪಾತ್ರವನ್ನೂ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಎರಡೂ ಸ್ವರೂಪಗಳಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಅವರು, ಇಂಗ್ಲೆಂಡ್ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರೊಂದಿಗೆ ನಡೆದ ಸಂದರ್ಶನದಲ್ಲಿ ತಮ್ಮ ಮನದಾಳದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಕೆ.ಎಲ್. ರಾಹುಲ್, “ನಾನು ನನ್ನ ಬಗ್ಗೆ ಪ್ರಾಮಾಣಿಕನಾಗಿದ್ದರೆ, ಆಟದಿಂದ ಹಿಂದೆ ಸರಿಯುವ ಸಮಯ ಬಂದಾಗ ಅದನ್ನು ವಿಳಂಬ ಮಾಡುವುದಿಲ್ಲ. ಅದರಲ್ಲಿ ಯಾವುದೇ ಅರ್ಥವಿಲ್ಲ. ನನಗೆ ಇನ್ನೂ ಸ್ವಲ್ಪ ಸಮಯ ಉಳಿದಿದೆ. ಆದರೆ ಕ್ರಿಕೆಟ್ ಬಿಟ್ಟ ನಂತರವೂ ಜೀವನದಲ್ಲಿ ಮಾಡಲು ಬಹಳಷ್ಟು ಇದೆ” ಎಂದು ಹೇಳಿದ್ದಾರೆ. “ಆಟವನ್ನು ತೊರೆದ ಬಳಿಕ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಬಹುದು. ನನ್ನ ಹೊರತಾಗಿಯೂ ದೇಶದ ಕ್ರಿಕೆಟ್ ಮುಂದುವರಿಯುತ್ತದೆ. ಜಗತ್ತಿನ ಕ್ರಿಕೆಟ್ ಕೂಡ ಮುಂದುವರಿಯುತ್ತದೆ. ಜೀವನದಲ್ಲಿ ಕ್ರಿಕೆಟ್ಗಿಂತಲೂ ಮಹತ್ವದ ವಿಷಯಗಳಿವೆ” ಎಂದು ರಾಹುಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮ್ಮ ಮೊದಲ ಮಗು ಜನಿಸಿದ ನಂತರ ಜೀವನದ ಬಗ್ಗೆ ತಮ್ಮ ದೃಷ್ಟಿಕೋನವೇ ಸಂಪೂರ್ಣವಾಗಿ ಬದಲಾಗಿದೆ ಎಂದು ಹೇಳಿರುವ ಅವರು, “ಇದು ಕಠಿಣ ಯುದ್ಧ. ನಾನು ತುಂಬಾ ಮುಖ್ಯನಲ್ಲ ಎಂದು ನನಗೆ ನಾನೇ ಹೇಳಿಕೊಳ್ಳಲು ಪ್ರಯತ್ನಿಸುತ್ತೇನೆ” ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಅತ್ಯುತ್ತಮ ಫಾರ್ಮ್ನಲ್ಲಿರುವ ಕೆ.ಎಲ್. ರಾಹುಲ್ ಅವರ ಈ ಹೇಳಿಕೆ ಅಭಿಮಾನಿಗಳು ಮತ್ತು ಕ್ರಿಕೆಟ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಅವರು ಭಾರತೀಯ ತಂಡಕ್ಕೆ ಇನ್ನೂ ಮಹತ್ವದ ಕೊಡುಗೆ ನೀಡುವ ನಿರೀಕ್ಷೆ ವ್ಯಕ್ತವಾಗಿದೆ.