ಬೆಂಗಳೂರು, ಜ. 25 (DaijiworldNews/TA): ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಕ್ರಿಕೆಟ್ ಅಭಿಮಾನಿಗಳು ಕಾದು ನೋಡುತ್ತಿದ್ದ ಭಾರತ–ಪಾಕಿಸ್ತಾನ್ ಮುಖಾಮುಖಿಗೆ ದಿನಾಂಕ ನಿಗದಿಯಾಗಿದೆ. ಸೂಪರ್-6 ಹಂತದ 12ನೇ ಪಂದ್ಯದಲ್ಲಿ ಫೆಬ್ರವರಿ 1ರಂದು ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ಝಿಂಬಾಬ್ವೆಯ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ಮೈದಾನ ಆತಿಥ್ಯ ವಹಿಸಲಿದೆ.

ಈ ಬಾರಿಯ ಅಂಡರ್-19 ವಿಶ್ವಕಪ್ನಲ್ಲಿ ಗ್ರೂಪ್-ಬಿಯಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ, ಶ್ರೇಷ್ಠ ಪ್ರದರ್ಶನದೊಂದಿಗೆ ಸೂಪರ್-6 ಹಂತ ಪ್ರವೇಶಿಸಿದೆ. ಮೊದಲ ಪಂದ್ಯದಲ್ಲಿ ಯುಎಸ್ಎ ವಿರುದ್ಧ 6 ವಿಕೆಟ್ಗಳ ಜಯ ಸಾಧಿಸಿದ ಭಾರತ, ನಂತರ ಬಾಂಗ್ಲಾದೇಶವನ್ನು 18 ರನ್ಗಳಿಂದ ಮಣಿಸಿತು. ಮೂರನೇ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿತು.
ಇನ್ನೊಂದೆಡೆ, ಗ್ರೂಪ್-ಸಿಯಲ್ಲಿ ಆಡಿದ ಪಾಕಿಸ್ತಾನ್ ತಂಡವು ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 37 ರನ್ಗಳ ಸೋಲು ಕಂಡರೂ, ಬಳಿಕ ಸ್ಕಾಟ್ಲೆಂಡ್ ಮತ್ತು ಆತಿಥೇಯ ಝಿಂಬಾಬ್ವೆ ವಿರುದ್ಧ ಜಯ ಸಾಧಿಸಿ 4 ಅಂಕಗಳೊಂದಿಗೆ ಸೂಪರ್-6 ಹಂತಕ್ಕೇರಲು ಯಶಸ್ವಿಯಾಯಿತು.
ಸೂಪರ್-6 ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಗ್ರೂಪ್-2ನಲ್ಲಿ ಸ್ಥಾನ ಪಡೆದಿದ್ದು, ಫೆಬ್ರವರಿ 1ರ ಪಂದ್ಯವು ಟೂರ್ನಿಯ ಅತ್ಯಂತ ಕುತೂಹಲಕಾರಿ ಪಂದ್ಯಗಳಲ್ಲಿ ಒಂದಾಗಿ ಪರಿಣಮಿಸಿದೆ. ವಿಶೇಷವಾಗಿ, 2025ರ ಅಂಡರ್-19 ಏಷ್ಯಾಕಪ್ ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ ಟೀಮ್ ಇಂಡಿಯಾ.
2025ರ ಅಂಡರ್-19 ಏಷ್ಯಾಕಪ್ ಫೈನಲ್ನಲ್ಲಿ ಪಾಕಿಸ್ತಾನ್ ತಂಡವು ಭಾರತವನ್ನು ಭಾರೀ ಅಂತರದಿಂದ ಮಣಿಸಿತ್ತು. ದುಬೈನ ಐಸಿಸಿ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ಆ ಪಂದ್ಯದಲ್ಲಿ ಪಾಕಿಸ್ತಾನ್ 50 ಓವರ್ಗಳಲ್ಲಿ 347 ರನ್ ಕಲೆಹಾಕಿದ್ದು, ಭಾರತ ಕೇವಲ 156 ರನ್ಗಳಿಗೆ ಆಲೌಟ್ ಆಗಿ 191 ರನ್ಗಳ ಭಾರಿ ಸೋಲು ಅನುಭವಿಸಿತ್ತು.
ಅದೇ ಸೋಲಿನ ಲೆಕ್ಕವನ್ನು ಈ ವಿಶ್ವಕಪ್ನಲ್ಲಿ ಚುಕ್ತಾ ಮಾಡುವ ಅವಕಾಶ ಇದೀಗ ಟೀಮ್ ಇಂಡಿಯಾಗೆ ಸಿಕ್ಕಿದೆ. ಅಂಡರ್-19 ವಿಶ್ವಕಪ್ ವೇದಿಕೆಯಲ್ಲಿ ನಡೆಯಲಿರುವ ಈ ಇಂಡೊ-ಪಾಕ್ ಮುಖಾಮುಖಿಯಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬುದನ್ನು ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.