ನವದೆಹಲಿ, ಜ. 24 (DaijiworldNews/TA): ನ್ಯೂಝಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಆರಂಭ ಪಡೆದಿದೆ. ಮೊದಲೆರಡು ಪಂದ್ಯಗಳಲ್ಲಿ ನಿರಂತರ ಜಯ ಸಾಧಿಸಿರುವ ಭಾರತ, ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲಿ 48 ರನ್ಗಳ ಗೆಲುವು ದಾಖಲಿಸಿದ್ದ ಭಾರತ, ದ್ವಿತೀಯ ಟಿ20 ಪಂದ್ಯದಲ್ಲಿ 7 ವಿಕೆಟ್ಗಳ ಅಂತರದಿಂದ ಅಮೋಘ ಜಯ ಗಳಿಸಿದೆ.

ವಿಶೇಷವೆಂದರೆ, ದ್ವಿತೀಯ ಪಂದ್ಯದಲ್ಲಿ 209 ರನ್ಗಳ ಭಾರೀ ಗುರಿಯನ್ನು ಕೇವಲ 15.2 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಟೀಮ್ ಇಂಡಿಯಾ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ. 200ಕ್ಕೂ ಹೆಚ್ಚು ರನ್ಗಳನ್ನು ಚೇಸ್ ಮಾಡಿ ಅತ್ಯಧಿಕ ಎಸೆತಗಳನ್ನು ಬಾಕಿ ಉಳಿಸಿಕೊಂಡ ತಂಡ ಎಂಬ ಅಪರೂಪದ ಸಾಧನೆ ಭಾರತಕ್ಕೆ ಲಭಿಸಿದೆ. ಈ ಸೋಲಿನ ಬಳಿಕ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ನೀಡಿದ ಹೇಳಿಕೆ ಇದೀಗ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. “ಭಾರತದಲ್ಲಿ ಟೀಮ್ ಇಂಡಿಯಾವನ್ನು ಎದುರಿಸುವುದು ಅಂದುಕೊಂಡಷ್ಟು ಸುಲಭವಲ್ಲ” ಎಂದು ಅವರು ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ.
ಮುಂದಿನ ಟಿ20 ವಿಶ್ವಕಪ್ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಬಹುತೇಕ ಪಂದ್ಯಗಳು ಭಾರತದಲ್ಲೇ ನಡೆಯಲಿವೆ. ಈ ಹಿನ್ನೆಲೆ, ಭಾರತ ವಿರುದ್ಧ ಕೇವಲ 200 ಅಥವಾ 210 ರನ್ಗಳು ಸಾಕಾಗುವುದಿಲ್ಲ ಎಂದು ಸ್ಯಾಂಟ್ನರ್ ಎಚ್ಚರಿಸಿದ್ದಾರೆ. “ನಾವು ಕಠಿಣ ಗುರಿ ನೀಡಿದರೂ ಗೆಲ್ಲಲು ಸಾಧ್ಯವಾಗುತ್ತಿಲ್ಲ. ಭಾರತ ತಂಡದ ಬ್ಯಾಟಿಂಗ್ ಲೈನಪ್ ಅಷ್ಟು ಬಲಿಷ್ಠವಾಗಿದೆ. ಅವರ ವಿರುದ್ಧ ಗೆಲ್ಲಬೇಕಾದರೆ 300 ರನ್ ಆದರೂ ಗಳಿಸಲೇಬೇಕು. 200–210 ರನ್ಗಳು ಸಾಕಾಗುವುದಿಲ್ಲ” ಎಂದು ಸ್ಯಾಂಟ್ನರ್ ಹೇಳಿದ್ದಾರೆ.
ಈ ಪಂದ್ಯದಲ್ಲಿ ಭಾರತ ಆರಂಭದಲ್ಲೇ 6 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಬೇಗನೆ ಔಟಾದರು. ಅದರಲ್ಲೂ ಅಭಿಷೇಕ್ ಶರ್ಮಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಆದರೆ ಆ ಬಳಿಕ ಕ್ರೀಸ್ಗೆ ಬಂದ ಇಶಾನ್ ಕಿಶನ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಕಿವೀಸ್ ಬೌಲರ್ಗಳ ಮೇಲೆ ಅಬ್ಬರಿಸಿದರು. ಈ ಮೂಲಕ ಭಾರತ ತಂಡವು ಇನ್ನೂ 28 ಎಸೆತಗಳು ಬಾಕಿಯಿರುವಂತೆಯೇ 209 ರನ್ಗಳ ಗುರಿ ತಲುಪಿ ಭರ್ಜರಿ ಜಯ ದಾಖಲಿಸಿತು. ಟಿ20 ವಿಶ್ವಕಪ್ಗೆ ಮುನ್ನವೇ ಟೀಮ್ ಇಂಡಿಯಾ ಬ್ಯಾಟರ್ಗಳು ಭರ್ಜರಿ ಫಾರ್ಮ್ ತೋರಿಸುತ್ತಿದ್ದು, ಎದುರಾಳಿ ತಂಡಗಳಿಗೆ ಇದು ದೊಡ್ಡ ಎಚ್ಚರಿಕೆಯಾಗಿದೆ. ಇದೇ ಕಾರಣಕ್ಕೆ “ಭಾರತವನ್ನು ಸೋಲಿಸಬೇಕಾದರೆ 300 ರನ್ ಆದರೂ ಬೇಕು” ಎಂಬ ಮಿಚೆಲ್ ಸ್ಯಾಂಟ್ನರ್ ಹೇಳಿಕೆ ಈಗ ಚರ್ಚೆಯ ಕೇಂದ್ರಬಿಂದುವಾಗಿದೆ.