ಬೆಂಗಳೂರು, ಜ. 23 (DaijiworldNews/TA): ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಗೆ ಶೀಘ್ರದಲ್ಲೇ ಹೊಸ ಮಾಲೀಕ ಸಿಗುವುದು ಬಹುತೇಕ ಖಚಿತವಾಗಿದೆ. ತಂಡದ ಹಾಲಿ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಆರ್ಸಿಬಿಯನ್ನು ಮಾರಾಟಕ್ಕೆ ಇಟ್ಟಿದ್ದು, ಔಷಧ ಉದ್ಯಮಿ ಹಾಗೂ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದಾರ್ ಪೂನವಾಲಾ ಖರೀದಿಗೆ ಅಧಿಕೃತವಾಗಿ ಬಿಡ್ ಮಾಡಿದ್ದಾರೆ.

ಕಳೆದ ನವೆಂಬರ್ನಲ್ಲಿಯೇ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಆರ್ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ನಿರ್ಧರಿಸಿತ್ತು. ಆ ಬಳಿಕ ಹಲವು ಕಂಪನಿಗಳು ಆಸಕ್ತಿ ತೋರಿದ್ದರೂ, ಇದೀಗ ಆದಾರ್ ಪೂನವಾಲಾ ಅವರ ಹೆಸರು ಮುಂಚೂಣಿಗೆ ಬಂದಿದೆ. ಸ್ವತಃ ಆದಾರ್ ಪೂನವಾಲಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆ ‘ಎಕ್ಸ್’ ಮೂಲಕ ಈ ವಿಚಾರವನ್ನು ಖಚಿತಪಡಿಸಿದ್ದು, “ಆರ್ಸಿಬಿ ಮಾರಾಟಕ್ಕಿದೆ. ಹೀಗಾಗಿ ಸಾಧ್ಯವಾದಷ್ಟು ಬಲವಾದ ಹಾಗೂ ಕಠಿಣ ಬಿಡ್ ಮಾಡುವೆ” ಎಂದು ಹೇಳಿದ್ದಾರೆ. ಆದರೆ ಆರ್ಸಿಬಿ ಖರೀದಿಗಾಗಿ ಎಷ್ಟು ಮೊತ್ತ ಹೂಡಲು ಸಿದ್ಧರಾಗಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.
ವರದಿಗಳ ಪ್ರಕಾರ, ಆರ್ಸಿಬಿ ಫ್ರಾಂಚೈಸಿಯ ಮೌಲ್ಯ 18,000 ರಿಂದ 20,000 ಕೋಟಿ ರೂಪಾಯಿ ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಹಾಲಿ ಚಾಂಪಿಯನ್ ಆಗಿರುವುದರ ಜೊತೆಗೆ, ವಿರಾಟ್ ಕೊಹ್ಲಿ ಮತ್ತು ಸ್ಮೃತಿ ಮಂಧಾನಾ ಅವರಂತಹ ಲೆಜೆಂಡರಿ ಆಟಗಾರರು ತಂಡದಲ್ಲಿರುವುದು ಆರ್ಸಿಬಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಇದರಿಂದ ಐಪಿಎಲ್ನ ಅತ್ಯಂತ ದುಬಾರಿ ಮತ್ತು ಜನಪ್ರಿಯ ತಂಡಗಳ ಪೈಕಿ ಆರ್ಸಿಬಿ ಒಂದಾಗಿ ಪರಿಣಮಿಸಿದೆ.
ಈ ನಡುವೆ, ಹಾಲಿ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನವೇ ಫ್ರಾಂಚೈಸಿಗೆ ಹೊಸ ಮಾಲೀಕ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಆರ್ಸಿಬಿ ಮುಂದಿನ ದಿನಗಳಲ್ಲಿ ತನ್ನ ತವರು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂದುವರಿಸಬಹುದೇ ಎಂಬ ಪ್ರಶ್ನೆಯೂ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಭಾರತದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಆದಾರ್ ಪೂನವಾಲಾ ಅವರ ಒಟ್ಟು ಸಂಪತ್ತು ಸುಮಾರು 2 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು, ಐಪಿಎಲ್ ಮೂಲಕ ಕ್ರೀಡಾ ಕ್ಷೇತ್ರದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಅವರು ಇಳಿದಿದ್ದಾರೆ.