ಬೆಂಗಳೂರು, ಜ. 21 (DaijiworldNews/ TA): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂದಿನ ಸೀಸನ್ನಲ್ಲಿ ಯಾವ ಸ್ಟೇಡಿಯಂನಲ್ಲಿ ಕಣಕ್ಕಿಳಿಯಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆರ್ಸಿಬಿ ಫ್ರಾಂಚೈಸಿಗೆ ಶೀಘ್ರವಾಗಿ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದೆ.

ಐಪಿಎಲ್ ಸೀಸನ್–19ರಲ್ಲಿ ಆರ್ಸಿಬಿ ತಂಡದ ತವರು ಮೈದಾನ ಯಾವುದು ಎಂಬ ಪ್ರಶ್ನೆ ಇದೀಗ ದೊಡ್ಡ ಚರ್ಚೆಯ ವಿಷಯವಾಗಿದೆ. ಇದರ ಪ್ರಮುಖ ಕಾರಣ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಮೇಲೆ ವಿಧಿಸಲಾದ ನಿರ್ಬಂಧ. ಐಪಿಎಲ್ 2025ರ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಆರ್ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದ ಘಟನೆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ಬಳಕೆಗೆ ನಿರ್ಬಂಧ ಹೇರಲಾಗಿತ್ತು.
ಈ ಮಧ್ಯೆ, ಕರ್ನಾಟಕ ಸರ್ಕಾರ ಕೆಲ ಷರತ್ತುಗಳೊಂದಿಗೆ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ. ಆದರೂ ಕೂಡ, ಆರ್ಸಿಬಿ ಫ್ರಾಂಚೈಸಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲು ಇನ್ನೂ ಅಧಿಕೃತ ದೃಢೀಕರಣ ನೀಡಿಲ್ಲ. ಐಪಿಎಲ್ ವೇಳಾಪಟ್ಟಿ ಅಂತಿಮಗೊಳಿಸುವ ಮೊದಲು ಎಲ್ಲಾ ಫ್ರಾಂಚೈಸಿಗಳು ತಮ್ಮ ಹೋಮ್ ಗ್ರೌಂಡ್ಗೆ ಸಂಬಂಧಿಸಿದಂತೆ ರಾಜ್ಯ ಕ್ರಿಕೆಟ್ ಮಂಡಳಿಗಳಿಂದ ಎನ್ಒಸಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಆರ್ಸಿಬಿ ಈವರೆಗೂ ತನ್ನ ತವರು ಮೈದಾನವನ್ನು ಖಚಿತಪಡಿಸದಿರುವ ಹಿನ್ನೆಲೆಯಲ್ಲಿ, ಬಿಸಿಸಿಐ ಜನವರಿ 27ರೊಳಗೆ ಹೋಮ್ ಗ್ರೌಂಡ್ ವಿವರ ಸಲ್ಲಿಸುವಂತೆ ಗಡುವು ವಿಧಿಸಿದೆ. ಅಂದರೆ ಮುಂದಿನ ಮಂಗಳವಾರದೊಳಗೆ ಆರ್ಸಿಬಿ ತನ್ನ ತವರು ಮೈದಾನವನ್ನು ಅಂತಿಮಗೊಳಿಸಲೇಬೇಕಾಗಿದೆ.
ಇದಕ್ಕೂ ಮುನ್ನ, ಚಿನ್ನಸ್ವಾಮಿ ಸ್ಟೇಡಿಯಂಗೆ ಪರ್ಯಾಯವಾಗಿ ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಹಾಗೂ ಛತ್ತೀಸ್ಗಢದ ರಾಯ್ಪುರದಲ್ಲಿರುವ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಆರ್ಸಿಬಿ ತನ್ನ ತವರು ಪಂದ್ಯಗಳನ್ನು ಆಡಲು ಚಿಂತನೆ ನಡೆಸುತ್ತಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಆರ್ಸಿಬಿ ಯಾವ ಮೈದಾನವನ್ನು ಆಯ್ಕೆ ಮಾಡಲಿದೆ ಎಂಬುದರ ಮೇಲೆ ಇದೀಗ ಅಭಿಮಾನಿಗಳ ಗಮನ ಕೇಂದ್ರೀಕೃತವಾಗಿದ್ದು, ಬಿಸಿಸಿಐ ವಿಧಿಸಿದ ಗಡುವಿನೊಳಗೆ ಫ್ರಾಂಚೈಸಿಯ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.